ಡಾ. ಬಿ.ಆರ್.ಅಂಬೇಡ್ಕರ್ ರವರು ಸಮಾಜದ ನಿರ್ಮಾತೃವಾಗಿದ್ದಾರೆ: ಪುಟ್ಟ ಮಾದಯ್ಯ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಏ.29:- ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಈ ದೇಶದ ಒಂದು ಮಹಾನ್ ಶಕ್ತಿ ಮತ್ತು ಸಮಾ ಸಮಾಜದ ನಿರ್ಮಾತೃವಾಗಿದ್ದಾರೆ ಎಂದು ಅಂಬೇಡ್ಕರ್ ವಸತಿ ಶಾಲೆಯ ಉಪನ್ಯಾಶಕ ಮತ್ತು ಸಾಹಿತಿ ಪುಟ್ಟು ಮಾದಯ್ಯ ತಿಳಿಸಿದರು.
ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಬಿ. ಆರ್. ಅಂಬೇಡ್ಕರ್ ಅವರ 133 ನೇ ಜನ್ಮ ದಿನಾಚರಣೆಯನ್ನುದ್ಘಾಟಿಸಿ ಮಾತನಾಡಿದರು.
ಡಾ. ಬಿ.ಆರ್ ಅಂಬೇಡ್ಕರ್ ರವರ ಆದರ್ಶ ತತ್ವಗಳು ಇತರರಿಗೆ ಮಾದರಿಯಾಗಿದ್ದು, ಸಮ ಸಮಾಜದ ನಿರ್ಮಾಣ ಮಾಡುವಲ್ಲಿ ಇವರ ಪಾತ್ರ ಅಪಾರವಾಗಿದೆ. ಭಾರತ ದೇಶಕ್ಕೆ ಸಂವಿಧಾನವನ್ನು ರೂಪಿಸುವುದರ ಮೂಲಕ ಪ್ರತಿ ಸಮುದಾಯಕ್ಕೂ ಹಕ್ಕು ಮತ್ತು ಸ್ವತಂತ್ರವನ್ನು ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಸಮ ಸಮಾಜವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರು ತಮ್ಮ ಅವಿರತ ಪರಿಶ್ರಮದ ಮೂಲಕ ಸಂವಿದಾನವನ್ನು ನೀಡಿ ಇಂದಿಗೂ ಜೀವಂತವಾಗಿದ್ದು, ಸರ್ವಕಾಲಕ್ಕೂ ಶ್ರೇಷ್ಠರಾಗಿದ್ದಾರೆ. ಆದ್ದರಿಂದ ಇವರು ಕೇವಲ ವ್ಯಕ್ತಿಯಲ್ಲ ಪ್ರತಿಯೊಬ್ಬರಿಗೂ ಶಕ್ತಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಶೋಷಿತ ಸಮುದಾಯದಲ್ಲಿ ಜನಿಸಿದ ಇವರು ಸಾಮಾಜಿಕ ಅಸಮಾನತೆ, ಜಾತಿ ಪದ್ಧತಿ ನಿರುದ್ಯೋಗ, ಬಡತನವನ್ನು ಹೋಗಲಾಡಿಸಲು ಬಹಳಷ್ಟು ಶ್ರಮಿಸಿದ್ದಾರೆ. ಈ ಕಾರಣಕ್ಕಾಗಿ ಅನೇಕ ಹೋರಾಟಗಳನ್ನು ಮಾಡುವುದರ ಮೂಲಕ ಸಂವಿಧಾನದಡಿಯಲ್ಲಿ ಪ್ರತಿ ಸಮುದಾಯಕ್ಕೂ ಸಾಮಾಜಿಕ ನ್ಯಾಯವನ್ನು ನೀಡುವಲ್ಲಿ ಪ್ರಮುಖರಾಗಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಪತ್ರಿಕೆಗಳನ್ನು ಹೊರ ತರುವ ಮೂಲಕ ಪ್ರತಿಯೊಬ್ಬರಲ್ಲಿಯೂ ಜಾಗೃತಿಯ ಅರಿವನ್ನು ಮೂಡಿಸಿದರು. ಈ ಕಾರಣಕ್ಕಾಗಿ ವಿಶ್ವಸಂಸ್ಥೆ ಇಂದು ಅಂಬೇಡ್ಕರ್ ಅವರ ಜನ್ಮ ದಿನವನ್ನು ವಿಶ್ವ ಜ್ಞಾನದ ದಿನವನ್ನಾಗಿ ಆಚರಣೆ ಮಾಡುತ್ತಿದೆ.
ಆದರೆ ಅನೇಕ ಕಾರಣಗಳಿಂದಾಗಿ ಸಂವಿಧಾನದ ಅವಕಾಶಗಳಿಂದ ಕೆಲವು ಸಮುದಾಯಗಳು ವಂಚಿತರಾಗಿ ಇಂದಿಗೂ ಸಾಮಾಜಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತಿಲ್ಲ ಎಲ್ಲಾ ಕ್ಷೇತ್ರಗಳನ್ನು ಖಾಸಗಿಕರಣ ಮಾಡುವುದರ ಮೂಲಕ ಸಂವಿಧಾನದ ಅವಕಾಶಗಳನ್ನು ಪಡೆಯದಂತೆ ಮಾಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಂಡು ಅವಕಾಶಗಳನ್ನು ಪಡೆದುಕೊಳ್ಳಬೇಕು ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಚಿಂತನೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಉಪನ್ಯಾಸಕ ಡಾ. ಸೋಮಣ್ಣ ಮಾತಾಡಿ ಈ ದೇಶದ ಉದ್ಧಾರಕ್ಕಾಗಿ ಮತ್ತು ಶೋಷಿತ ಸಮುದಾಯಗಳನ್ನು ಮುಖ್ಯ ವಾಹಿನಿಗೆ ತರಬೇಕೆಂದು ಹಗಲಿರುಳು ತನ್ನ ಸಮುದಾಯ ಹಾಗೂ ದೇಶಕ್ಕೆ ಯಾವುದೇ ಕಳಂಕ ಬರದ ಹಾಗೆ ಅವರಿಗೆ ಅನೇಕ ಅವಮಾನಗಳನ್ನು ಕೊಟ್ಟರು ಸಹ ಎಲ್ಲವನ್ನು ಸಹಿಸಿಕೊಂಡು ಈ ದೇಶಕ್ಕೆ ಬೃಹತ್ ಸಂವಿಧಾನವನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ ಅದೇ ರೀತಿ ಅವರನ್ನು ವಿಶ್ವಮಾನವ ತತ್ವಜ್ಞಾನಿ ವಿಶ್ವಗುರು ಸಮ ಸಮಾಜದ ಸುಧಾರಕ ಹೀಗೆ ಅನೇಕ ಬಿರುದುಗಳನ್ನು ನೀಡಿದ್ದಾರೆ ಅವರು ಜಾತಿ ಪದ್ಧತಿ ವಿರುದ್ಧ ಮತ್ತು ಸಮಾಜದಲ್ಲಿ ಇರುವ ಅಸಮಾನತೆಯನ್ನು ಹೋಗಲಾಡಿಸುವ ಸಲುವಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ ಅವರ ಆದರ್ಶ ತತ್ವವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು, ಈ ಸಂದರ್ಭ ಎಸ್ ಕೆ ಎಸ್ ಟಿ ಬಾಲಕಿಯರ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಮಹಾದೇವಪ್ಪ ಎಚ್ ಡಿ ಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾದ ಪುಟ್ಟರಾಜು ಅವರು ಅಂಬೇಡ್ಕರ್ ಬಗ್ಗೆ ಸಂಕ್ಷಿಪ್ತವಾಗಿ ಮಾತಾಡಿದರು . ಈ ಸಂದರ್ಭ ಪಂಚವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ರೂಪ ,ಮೂಲ ನಿವಾಸಿ ಅಂಬೇಡ್ಕರ್ ಸಂಘದ ಜಿಲ್ಲಾ ಸಂಚಲಕರಾದ ಚನ್ನಬಸವಣ್ಣ, ಸುಂದ್ರಯ್ಯ ,ಕರಿಯಯ್ಯ, ಉಪನ್ಯಾಸಕ ನಟರಾಜ್, ರವೀಂದ್ರ ,ರಾಜಮ್ಮ ,ಸಣ್ಣಯ್ಯ, ರಮೇಶ್, ಬಸವರಾಜ್, ಚನ್ನಬಸವಯ್ಯ ಸಾಮಾಜಿಕ ಕ್ರಾಂತಿ ಸೂರ್ಯ ಡಾ ಬಿಆರ್ ಅಂಬೇಡ್ಕರ್ ಯುವಕ ಸಂಘದ ಗೌರವ ಅಧ್ಯಕ್ಷ ಪಿ ರವಿ, ಅಧ್ಯಕ್ಷ ಸತೀಶ್ ಎಸ್ ಆರ್, ಉಪಾಧ್ಯಕ್ಷ ಪ್ರಭಾಕರ್ ,ಕಾರ್ಯದರ್ಶಿ ಸುನಿಲ್ ಎಸ್ ಕೆ ,ಪ್ರೇಮ್, ಸಂತೋಷ್ ,ವಿಜಯ್, ಶಿವರಾಜ್ ,ಸಣ್ಣಯ್ಯ ಮತ್ತಿತರರು ಹಾಜರಿದ್ದರು.