
ಕಲಬುರಗಿ:ಎ.14: ದೇಶದಲ್ಲಿನ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹಗಲಿರುಳು ಶ್ರಮಿಸಿ ಸಮ ಸಮಾಜದ ಬಲವರ್ಧನೆಗೆ ದಿಟ್ಟತನದಿಂದ ಹೋರಾಡಿದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಮಹಾನ್ ತಪಸ್ವಿಯಾಗಿದ್ದಾರೆ. ಅವರೊಬ್ಬ ಬಹುಮುಖ ವ್ಯಕ್ತಿತ್ವದ ವಿಶ್ವಜ್ಞಾನಿ. ಅವರ ವೈಜ್ಞಾನಿಕ ಚಿಂತನೆಗಳು ಪ್ರಸ್ತುತ ಮನುಕುಲದ ಉಳಿವಿಗೆ ಹಾಗೂ ದೇಶದ ಪ್ರಗತಿ ಸಾಧನೆಗೆ ಆಧಾರ ಸ್ಥಂಭವಾಗಿವೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ್ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯು ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ ಡಾ. ಬಿ. ಆರ್. ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದರು.
ಡಾ. ಬಿ. ಆರ್. ಅಂಬೇಡ್ಕರ್ ಅವರು ವಿಶ್ವದ ಮಹಾನ್ ಸಂಶೋಧಕರು. ದೇಶದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಜ್ವಲಂತ ಸಮಸ್ಯೆಗಳಿಗೆ ವೈಜ್ಞಾನಿಕ ಸುಧಾರಣೆಗಳನ್ನು ಅವಿಷ್ಕರಿಸುವ ಮೂಲಕ ದೇಶದ ಭದ್ರತೆಗೆ ಸಂವಿಧಾನವನ್ನು ರಚಿಸಿದ್ದಾರೆ. ಅವರ ಮೌಲ್ಯಯುತ ಚಿಂತನೆ ಮತ್ತು ಸಾಧನೆಯನ್ನು ಯುವ ಜನಾಂಗ ಸ್ಮರಿಸಿಕೊಂಡು ಹೊಸತನದ ಸಮಾಜಕ್ಕೆ ಸ್ವತಂತ್ರ ಮನಸ್ಸಿನಂದ ತೆರೆದುಕೊಳ್ಳಬೇಕಿದೆ ಎಂದರು.
ಸಮಾನತೆಯ ಸಂದೇಶ ಸಾರಿದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನದ ಶಿಸ್ತು, ಕಾರ್ಯ ಬದ್ಧತೆ ಮತ್ತು ಕರ್ತವ್ಯ ಪ್ರಜ್ಞೆಯ ಮೂಲಕ ಇಡೀ ಜಗತ್ತನ್ನೇ ಬೆಳಗಿದವರು. ಸಮಾಜದ ಎಲ್ಲಾ ವರ್ಗಗಳ ಬದಲಾವಣೆಗೆ ಬೆಳಕು ತೋರಿದವರು. ಬೆಳಕಿನ ಪ್ರಖರತೆಯು ಎಲ್ಲರ ಸಾಮಾಜಿಕ ಬದುಕನ್ನು ಹೇಗೆ ಪ್ರಕಾಶಿಸಲಿದೆಯೋ ಅದರಂತೆ, ಉತ್ಕøಷ್ಠ ಶಿಕ್ಷಣ, ಉತ್ತಮ ವ್ಯಕ್ತಿತ್ವ, ಜ್ಞಾನದ ಜೊತೆಗೆ ಪ್ರಜ್ಞಾವಂತಿಕೆಯ ವಿವೇಚನೆಯಿಂದ ಮಾತ್ರ ಹೊಸತನದ ಸುಸ್ಥಿರ ಸಮಾಜ ನಿರ್ಮಿಸಲು ಸಾಧ್ಯವಿದೆ. ಇದಕ್ಕೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಜ್ಞಾನದ ಶಕ್ತಿಯೇ ಪ್ರೇರಣೆ ಎಂದು ಅವರು ವೈಯಕ್ತಿಕ ಬದುಕು, ಕೌಟಂಬಿಕ ಬದುಕಿಗೆ ಆದ್ಯತೆ ನೀಡದೆ ಶೋಷಿತ ಹಾಗೂ ದುರ್ಬಲರ ಪರವಾಗಿ ದಿಟ್ಟತನದಿಂದ ಹೋರಾಡಿದ ಮಹಾನ್ ಚೇತನ ಡಾ. ಬಿ. ಆರ್. ಅಂಬೇಡ್ಕರ್ ಎಂದು ಹೇಳಿದರು.
ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯ ನಿದೇರ್ಶಕ ಪ್ರೊ. ಚಂದ್ರಕಾಂತ ಎಂ ಯಾತನೂರ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಆದರ್ಶ ವ್ಯಕ್ತಿತ್ವ ಮತ್ತು ಜ್ಞಾನವನ್ನು ಇಡೀ ಜಗತ್ತು ಸ್ಮರಿಸಿ ಗೌರವಿಸುತ್ತಿದೆ. ದೇಶದ ರೂಪಾಯಿ ಸಮಸ್ಯೆ, ಆರ್ಥಿಕ ಬಿಕ್ಕಟ್ಟು ಮತ್ತು ಸಾಮಾಜಿಕ ಸಮಸ್ಯೆಗಳನ್ನು ವೈಜ್ಞಾನಿಕ ಚಿಂತನೆಗಳ ಮೂಲಕ ಸರಳೀಕರಿಸಿ ಸುಧಾರಣೆ ನೀಡಿದ ಮೇಧಾವಿ ಎನಿಸಿಕೊಂಡಿದ್ದಾರೆ. ಅವರ ಮಾನವೀಯತೆ, ಸಮಾನತೆ ಮತ್ತು ಬಾತೃತ್ವದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ವಿದ್ಯಾರ್ಥಿಗಳು ಅವರ ಚಿಂತನೆಗಳನ್ನು ಅಧ್ಯಯನ ಮಾಡುವ ಮೂಲಕ ಅಳವಡಿಸಿಕೊಳ್ಳಬೇಕಿದೆ ಎಂದರು.
ವೇದಿಕೆಯಲ್ಲಿ ಕುಲಸಚಿವ ಡಾ. ಬಿ. ಶರಣಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ದಮ್ಮ ಪ್ರಕಾಶ, ವಿತ್ತಾಧಿಕಾರಿ ಪ್ರೊ. ರಾಜನಾಳ್ಕರ್ ಲಕ್ಷ್ಮಣ ಉಪಸ್ಥಿತರಿದ್ದರು. ಸಂಗೀತ ವಿಭಾಗದ ಶಿಕ್ಷಕ ಸಿಬ್ಬಂದಿ ಚಿಮ್ಮಹಿದ್ಲಾಯಿ ಹಾಗೂ ಜಯತೀರ್ಥ ಆದ್ಯ ಬುದ್ಧವಂದನ ಹಾಗೂ ಡಾ. ಬಿ.ಆರ್. ಆಂಬೇಡ್ಕರ್ ಗೀತೆಗಳನ್ನು ಪ್ರಸ್ತುತಪಡಿಸಿದರು. ಡಾ. ಬುದ್ಧ ಭಾರತ್ ಬೆಂಡೆ ವಂದಿಸಿದರು. ಡಾ. ಕಾಶಿನಾಥ ನೂಲ್ಕರ್ ಕಾರ್ಯಕ್ರಮ ನಿರ್ವಹಿಸಿದರು.