ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ: ಅದ್ಧೂರಿ ಆಚರಣೆಗೆ ಸಿದ್ಧತೆ

ಕಲಬುರಗಿ,ಮಾ19 : ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಬರುವ ಏಪ್ರಿಲ್ 14ರಂದು ಅತ್ಯಂತ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹಿರಿಯ ದಲಿತ ಮುಖಂಡ ಡಾ.ವಿಠ್ಠಲ ದೊಡ್ಡಮನಿ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಏಪ್ರಿಲ್ 13 ಮತ್ತು 14ರಂದು ಬಾಬಾ ಸಾಹೇಬರ ಜಯಂತಿಯನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಇದೇ ಮೊದಲ ಬಾರಿಗೆ ಅಂಬೇಡ್ಕರ್ ಜಯಂತಿ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗಾಗಿ ಕ್ವಿಜ್ ಕಾರ್ಯಕ್ರಮ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಜಯಂತ್ಯುತ್ಸವದಲ್ಲಿ ದೇಶದ ಖ್ಯಾತ ಚಿಂತಕರ ಪೈಕಿ ಯಾರಾದರೂ ಒಬ್ಬರನ್ನು ಪ್ರಮುಖ ಭಾಷಣಕಾರರನ್ನಾಗಿ ಆಹ್ವಾನಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷ ದಿನೇಶ್ ಎನ್.ದೊಡ್ಡಮನಿ ನೇತೃತ್ವದಲ್ಲಿ ಹಲವು ಸುತ್ತಿನ ಸಭೆಗಳು ನಡೆಯಲಿವೆ ಎಂದು ತಿಳಿಸಿದರು.
ದಶರಥ ಬಾಬು ಒಂಟಿ, ದಿಗಂಬರ ಬೆಳಮಗಿ, ಗುಂಡಪ್ಪ ಲಂಡನಕರ್, ಗಣೇಶ ವಳಕೇರಿ, ಅರ್ಜುನ ಭದ್ರೆ, ವಿಶಾಲ ದರ್ಗಿ, ಎಸ್.ಎಸ್.ತಾವಡೆ, ವಿಶಾಲ ನವರಂಗ, ಪ್ರಕಾಶ ಮೂಲಭಾರತಿ, ರಾಹುಲ್ ಉಪಾರೆ, ಅವಿನಾಶ ಗಾಯಕವಾಡ, ದೇವೀಂದ್ರ ಸಿನ್ನೂರ, ಪ್ರಕಾಶ್ ಅವರಾದ ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


ಪ್ರಗತಿಪರ ಸಿನಿ ತಾರೆ ಭಾಗಿ
ಈ ಬಾರಿಯ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಾರಂಭದಲ್ಲಿ ಜನಪರ ಚಿಂತನೆಯ ಸಿನಿ ತಾರೆಗಳ ಪೈಕಿ ಯಾರಾದರೂ ಒಬ್ಬರನ್ನು ಆಹ್ವಾನಿಸಲಾಗುವುದು ಎಂದು 132ನೇ ಜಿಲ್ಲಾ ಜಯಂತ್ಯುತ್ಸವ ಸಮಿತಿ ಜಿಲ್ಲಾಧ್ಯಕ್ಷ ದಿನೇಶ್.ಎನ್.ದೊಡ್ಡಮನಿ ತಿಳಿಸಿದರು.
ಈಗಾಗಲೇ ಕನ್ನಡದ ಖ್ಯಾತ ತಾರೆಯರಾದ ಡಾಲಿ ಧನಂಜಯ, ನೀನಾಸಂ ಸತೀಶ್ ಮತ್ತು ಕಿಶೋರ್ ಬಾಬು ಅವರನ್ನು ಸಂಪರ್ಕಿಸುವ ಯತ್ನ ನಡೆದಿದೆ. ಈ ಪೈಕಿ ಯಾರಾದರೂ ಒಬ್ಬರು ಸಮಾವೇಶದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಇನ್ನು, ಕನ್ನಡ ಭವನ ಆವರಣದ ಸುವರ್ಣ ಭವನದಲ್ಲಿ ಏಪ್ರಿಲ್ 8ರಂದು ಕವಿಗೋಷ್ಠಿ, ಏ.9ರಂದು ವಿಚಾರ ಗೋಷ್ಠಿ, ಇದರ ಬೆನ್ನಲ್ಲೇ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಏಪ್ರಿಲ್ 10ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.


ಬಂಡಾಯ ಇಲ್ಲ
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತಿ ಆಚರಣೆಯ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹಿರಿಯ ದಲಿತ ಮುಖಂಡರಾದ ಡಾ.ವಿಠ್ಠಲ ದೊಡ್ಡಮನಿ, ಅರ್ಜುನ ಭದ್ರೆ, ಗುಂಡಪ್ಪ ಲಂಡನಕರ್ ಹಾಗೂ ಎಸ್.ಎಸ್.ತಾವಡೆ ಸ್ಪಷ್ಟಪಡಿಸಿದರು.
ಸಮಿತಿಯಲ್ಲಿರುವ ಕೆಲವು ಯುವಕರು ಈ ಕುರಿತು ತಮ್ಮ
ಅಸಮಾಧಾನ ಹೊರಹಾಕಿದ್ದು ನಿಜವಾದರೂ, ಅವರೊಂದಿಗೆ ಚರ್ಚಿಸಿ ಮನವೊಲಿಸಲಾಗಿದೆ ಎಂದರು.