
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ. 15 :- ದೇಶದಲ್ಲಿದ್ದ ಜಾತಿ ವ್ಯವಸ್ಥೆ ವಿರುದ್ಧ ತನ್ನ ಅನುಭವದ ಮೂಲಕ ಹೋರಾಡಿ ಸಮಸಮಾಜದ ನಿರ್ಮಾಣಕ್ಕೆ ಶ್ರಮಿಸಿ ಇಡೀ ವಿಶ್ವ ಸುತ್ತಾಡಿ ಭಾರತಕ್ಕೆ ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವದ ಸಂವಿಧಾನ ರಚಿಸಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಿದ ಆರ್ಥಿಕ ತಜ್ಞ ಹಾಗೂ ದಲಿತರ ಪಾಲಿನ ಆಶಾಕಿರಣವಾಗಿರುವ ಡಾ ಬಿ ಆರ್ ಅಂಬೇಡ್ಕರ್ ಭಾರತದೇಶಕ್ಕಲ್ಲದೆ ಇಡೀ ವಿಶ್ವಕ್ಕೆ ಜ್ಞಾನಿಯಾಗಿದ್ದರೆಂದು ಕರ್ನಾಟಕ ಡಳಿತ ಸಂಘರ್ಷ ಸಮಿತಿ ಪ್ರೊ. ಕೃಷ್ಣಪ್ಪ ಬಣದ ವಿಜಯನಗರ ಜಿಲ್ಲಾ ಸಂಚಾಲಕ ಎಸ್ ದುರುಗೇಶ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಸರಳವಾಗಿ ಆಯೋಜಿಸಿದ ಡಾ ಬಿ ಆರ್ ಅಂಬೇಡ್ಕರ್ ರವರ 132ನೇ ಜಯಂತಿ ಆಚರಣೆಯಲ್ಲಿ ಭಾಗವಹಿಸಿ
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತ ಜಗತ್ತಿನೆಲ್ಲೆಡೆ ಕೊಂಡಾಡುವಂತಹ ಜ್ಞಾನ ಸಂಪತ್ತು ಹೊಂದಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರು ವಿಶ್ವಜ್ಞಾನಿಯಾಗಿದ್ದರು. ದಲಿತರ ಬಾಳನ್ನು ಬೆಳಗುವಂಥ ಸೂರ್ಯ ಅವರಾಗಿದ್ದು, ದೇಶದ ಎಲ್ಲಾ ಸಮುದಾಯಗಳ ಬಡವರ ಪರವಾಗಿ ಧ್ವನಿ ಎತ್ತಿದ್ದ ಧೀಮಂತ ಹೋರಾಟಗಾರ. ಅವರು ರಚಿಸಿದ ಸಂವಿಧಾನ ಜಗತ್ತಿನಲ್ಲೇ ಶ್ರೇಷ್ಠ ಎಂಬುದಾಗಿ ಪ್ರಸಿದ್ಧಿಯಾಗಿದೆ. ಇಂಥ ಸಂವಿಧಾನ ಆಶಯಗಳು ಈಡೇರಬೇಕಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯುವ ಮೂಲಕ ಸಮ ಸಮಾಜವನ್ನು ನಿರ್ಮಿಸಬೇಕಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಟಿ.ಜಗದೀಶ್, ತಾಪಂ ಇಒ ವೈ.ರವಿಕುಮಾರ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಜಗದೀಶ್ ದಿಗಡೂರು, ಪತ್ರಕರ್ತ ಹಾಗೂ ಸಾಹಿತಿ ಭೀಮಣ್ಣ ಗಜಾಪುರ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗುಣಸಾಗರ ಕೃಷ್ಣಪ್ಪ, ಅಂಬೇಡ್ಕರ್ ಸಂಘದ ಮಾಜಿ ಅಧ್ಯಕ್ಷ ಕರಿಬಸಪ್ಪ, ವಕೀಲ ಡಿ.ಎಚ್.ದುರುಗೇಶ್, ಅವರು ಡಾ.ಬಿ.ಆರ್.ಅಂಬೇಡ್ಕರ್ ಸವೆಸಿದ ಹಾದಿ, ಸಾಧನೆಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವಸಂತ ವಿ.ಅಸೋದೆ, ಪಿಎಸ್‌ಐ ಧನಂಜಯ, ಪಪಂ ನಾಮನಿರ್ದೇಶಿತ ಸದಸ್ಯ ಬಂಡೆ ರಾಘವೇಂದ್ರ, ದಸಂಸ ಪದಾಧಿಕಾರಿಗಳಾದ ನಿವೃತ್ತ ಶಿಕ್ಷಕ ಕಲ್ಲಹಳ್ಳಿ ಬಸಪ್ಪ, ಕೂಡ್ಲಿಗಿ ದ ಸಂ ಸಮಿತಿ ತಾಲೂಕು ಸಂಚಾಲಕ ಕಂದಗಲ್ಲು ಪರಶುರಾಮ್, ಪರಶುರಾಮ್, ಸಾಸಲವಾಡ ಶಿವಣ್ಣ, ಸಾಲುಮನಿ ರಾಘವೇಂದ್ರ ಸೇರಿ ಕೆಲ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.