
ಕಲಬುರಗಿ:ಏ.15: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದಾದ್ಯಾಲಯ ಕಲಬುರಗಿಯಲ್ಲಿ “ಡಾ. ಬಿ.ಆರ್. ಅಂಬೇಡ್ಕರ್ ರವರ 132ನೇ ಜಯಂತಿ” ನಿಮಿತ್ಯ “ಡಾ. ಬಾಬಾ ಸಾಹೇಬರ ಶೈಕ್ಷಣಿಕ ಸಾಧನೆ ಕುರಿತು ವಿಶೇಷ ಉಪನ್ಯಾಸ” ಕಾರ್ಯಕ್ರಮ ಉದ್ಘಾಟಿಸಿದ ಪ್ರೊ. ವೆಂಕಣ್ಣ ಡೊಣ್ಣೇಗೌಡ್ರು ಪ್ರಾಧ್ಯಾಪಕರು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ ಕಲಬುರಗಿ ಅವರು ಮಾತನಾಡುತ್ತ, ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತಕಂಡ ಒಬ್ಬ ಮಹಾನ್ ಚಿಂತಕ. ಹಿಂದುಳಿದ ವರ್ಗದ ಜನತೆಯಲ್ಲಿ ಬದುಕಿನ ಬಗ್ಗೆ ಆಶಾಭಾವನೆ ಮೂಡಿಸಿ ಅವರ ಉನ್ನತಿಗಾಗಿ ಹಗಲಿರುಳು ಶ್ರಮಿಸಿದ ದಿವ್ಯಚೇತನ. ಭಾರತದ ಸಂವಿಧಾನ ಶಿಲ್ಪಿಯಾಗಿ ಅವರು ನೀಡಿದ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು ಅವರ ವಿಚಾರಧಾರೆಯನ್ನು ಗ್ರಹಿಸಿ, ಅರಗಿಸಿಕೊಂಡು, ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಬೇಕು. ಒಂದು ದಿನದಲ್ಲಿ 21 ಗಂಟೆಗಳ ಕಾಲ ಅಭ್ಯಾಸಮಾಡಿ ನಮ್ಮ ದೇಶದ ಸಂವಿಧಾನ ರಚಿಸಿದ್ದಾರೆ. ಅವರು ವಿದ್ಯಾರ್ಥಿಯಾಗಿದ್ದಾಗ ದಿನಕ್ಕೆ 18 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದರು ಎಂದರು.
ಜಗತ್ತಿನಲ್ಲಿ ಮೂರು ಪ್ರಕಾರದ ಜನರಿರುತ್ತಾರೆ ಎಂಬ ಸರ್ವಜ್ಞ ವಚನ “ಮಾತು ಆಡದೆ ಮಾಡುವವರು ರೂಢಿಯೊಳಗೆ ಉತ್ತಮರು, ಮಾತು ಆಡಿ ಮಾಡುವವರು ಮಧ್ಯಮರು, ಮಾತು ಆಡಿ ಮಾಡದೆತಾಇರುವವರು ಅಧಮರು ಸರ್ವಜ್ಞ ಎಂಬಂತೆ ಮಾತಾಡದೆ ಸಾಧನೆ ಮಾಡಿದ ಸಾಧಕರಲ್ಲಿ ಡಾ. ಅಂಬೇಡ್ಕರ್ ರವರು ಎಂದರು. ಅದ್ಭುತವಾದ ಪ್ರತಿಭಾವಂತರು, ಜ್ಞಾನದ ನಿಧಿ, ಶಿಕ್ಷಣತಜ್ಞ, ಆರ್ಥಿಕತಜ್ಞ, ಸಮಾಜ ಸುಧಾರಕ, ಸಮಾಜದಲ್ಲಿದ್ದ ಸಾಮಾಜಿಕ ಪಿಡುಗಾದ ಜಾತಿ ಪದ್ಧತಿ ನಿರ್ಮೂಲನೆಗಾಗಿ ಶ್ರಮಿಸಿದರು.
ನಮ್ಮ ದೇಶ ಜಾತ್ಯಾತೀತ ದೇಶವಾಗಬೇಕಾದರೆ ಬಸವಾದಿ ಶರಣರ, ದಾಸರ, ಸಂತರ, ತತ್ವಪದಕಾರರ, ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಆಚರಣೆಯಲ್ಲಿ ತರಬೇಕು ಎಂದರು. ಧರ್ಮವೆಂದರೆ ತಾನು ಬದುಕುವುದರೊಂದಿಗೆ ಇನ್ನೊಬ್ಬರನ್ನು ಬದುಕಿಸುವದಾಗಿದೆ. ಸಮಾನತೆ, ಸ್ವಾತಂತ್ರ್ಯ, ಸಹೋದರತೆಯೊಂದಿಗೆ ಬದುಕುವುದೇ ಧರ್ಮ ಎಂದರು. ಮಾನವರೆಲ್ಲರೂ ಮನುಷ್ಯರಂತೆ ಬಾಳಿದರೆ ಈ ಭೂಮಿಯೇ ಸ್ವರ್ಗವಾಗುತ್ತದೆ. ಧರ್ಮದ ಹೆಸರಿನಲ್ಲಿ ಸುಖ ಪಡುವವರು, ಸಮಾಜದಲ್ಲಿ ಮುಗ್ದ ಜನರನ್ನು ಶೋಷಿಸುವವರು ಬಹಳ ಜನರಿದ್ದಾರೆ. ಅವರ ಭಾವನೆ ಬದಲಾಗಬೇಕು. ಮೌಢ್ಯತೆ ಹೋಗಬೇಕು. ಮುಗ್ದ ಜನರ ಶೋಷಣೆ ತಪ್ಪಬೇಕು. ವ್ಯಕ್ತಿಗಿಂತ ದೇಶ ದೊಡ್ಡದು ಎಂಬ ಭಾವನೆ ಬರಬೇಕು. ನನ್ನ ಜನರಿಗೆ ಮಾನವ ಹಕ್ಕುಗಳನ್ನು ಒದಗಿಸಿಕೊಡುವದೇ ನನ್ನ ಜೀವನದ ಗುರಿಯಾಗಿದೆ ಎಂದು ಬಾಬಾ ಸಾಹೇಬರು ಹೇಳಿದ್ದಾರೆ ಎಂದರು.
ಅಸ್ಪೃಶ್ಯರಿಗೆ ಸಮಾನವಾದ ಶಿಕ್ಷಣ, ಸಮಾನತೆ, ಅಧಿಕಾರ, ಹಕ್ಕು, ಉತ್ತಮ ಜ್ಞಾನ ದೊರಕಬೇಕು. ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆಯಾಗುತ್ತದೆ. ದೀನ ದಲಿತರು ಉತ್ತಮ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಎಲ್ಲರೂ ಸಂಕುಚಿತ ಭಾವನೆ ಬಿಟ್ಟು ವಿಶಾಲ ಮನಸ್ಸು ಹೊಂದಿರಬೇಕು. ಮತ, ಪಂಥ, ಧರ್ಮ, ಭಾಷೆ, ಪ್ರಾಂತವನ್ನು ಅವಲಂಬಿಸಿ ಮನಸ್ಸು ಕ್ರಿಯಾಶೀಲವಾಗುವದು ತಪ್ಪು ಎಂದು ಡಾ. ಬಾಬಾ ಸಾಹೇಬರು ಹೇಳಿದ್ದಾರೆ ಎಂದರು. ಒಬ್ಬನನ್ನು ಮಹಾತ್ಮನೆಂದು ಒಪ್ಪಿಕೊಳ್ಳಬೇಕಾದರೆ ಜಾತಿಗಿಂತ ಸಾಧನೆಗೆ ಮಹತ್ವ ಕೊಡಬೇಕು.
ಡಾ. ಬಿ.ಆರ್. ಅಂಬೇಡ್ಕರ ಅವರು ಅಸ್ಪೃಶ್ಯರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಜಾತಿ, ಸಾಮಾಜಿಕ ವ್ಯವಸ್ಥೆ, ವಂಶ ಪರಂಪರೆ ಅಧಿಕಾರ, ಪುರೋಹಿತ ಶಾಹಿಯ ಗುಣಗಳನ್ನು ವಿರೋಧಿಸಿದರು. ನಾವು ಇನ್ನೊಬ್ಬರ ಸ್ಥಾನದಲ್ಲಿದ್ದು ಅವರ ಕಷ್ಟ, ಸುಖ, ನೋವು ಅರ್ಥಮಾಡಿಕೊಳ್ಳಬೇಕು. ಹಿಂದೆ ಜಾತಿಯ ನೆಪದಲ್ಲಿ ದೇವಾಲಯ, ಶಾಲೆ, ಕೆರೆ, ಸಾರ್ವಜನಿಕ ಸ್ಥಳಗಳಿಗೆ ಅಸ್ಪೃಶ್ಯರಿಗೆ ಪ್ರವೇಶವಿರಲಿಲ್ಲ. ಇದು ಅವೈಜ್ಞಾನಿಕ ಪದ್ಧತಿ ಇದನ್ನು ವಿರೋಧಿಸಿದರು. ಅಸ್ಪೃಶ್ಯರನ್ನು ಸಾಮಾಜಿಕವಾಗಿ, ಧಾರ್ಮಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ದುರ್ಬಲವಾಗಿರುವವರನ್ನು ಪ್ರಬಲರನ್ನಾಗಿಸಿದರು. ಅಸ್ಪೃಶ್ಯತೆ ನಿವಾರಣೆಗಾಗಿ ಬಾಲ್ಯದಲ್ಲಿಯೇ ಶಪಥ ಮಾಡಿದರು. ದೇಶದಲ್ಲಿ ಎಲ್ಲಿಯವರೆಗೆ ಜಾತಿ ಪದ್ಧತಿ ಇರುತ್ತದೆಯೋ ಅಲ್ಲಿಯವರೆಗೆ ದೇಶದ ಸ್ಥಿತಿ ಸುಧಾರಿಸುವುದಿಲ್ಲ. ಜಾತಿಯ ನೆಪದಲ್ಲಿ ಸಮಾಜ ಒಡೆಯುವದು. ಸ್ವಾರ್ಥಕ್ಕಾಗಿ ಮನುಷ್ಯರನ್ನು ವಿಂಗಡಿಸುವದು ಅಮಾನವೀಯ ಗುಣವಾಗಿದೆ ಎಂದು ಡಾ. ಅಂಬೇಡ್ಕರ್ ರವರು ತಿಳಿಸಿದ್ದಾರೆ ಎಂದರು. ಡಾ. ಅಂಬೇಡ್ಕರ ಅವರ ವ್ಯಕ್ತಿತ್ವ ನಿಜಕ್ಕೂ ಅಸಾಧಾರಣವಾದುದು. ಅಪಾರವಾದ ಪಾಂಡಿತ್ಯ, ಪ್ರತಿಭೆ ಹೊಂದಿದ್ದು ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅವರ ಬರೆದ ಕೃತಿಗಳು ಓದಲು ಅವರ ಸಾಧನೆ ಬಗ್ಗೆ ಮಾತನಾಡಲು ಒಂದು ಜನ್ಮ ಸಾಕಾಗುವುದಿಲ್ಲ. ಅವರ ಜೀವನ ಸಾಧನೆಯನ್ನು ಅರಿತು ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಸಾಧನೆ ಮಾಡಬೇಕೆಂದು ಪ್ರೇರೇಪಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಮೂಹದ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಅವರು, ಡಾ. ಬಿ.ಆರ್. ಅಂಬೇಡ್ಕರ ಅವರು ದಲಿತರ ಸೂರ್ಯ ಅಷ್ಟೇ ಅಲ್ಲ ಭಾರತದ ಸೂರ್ಯ. ಭಾರತ ಕತ್ತಲೆಯಲ್ಲಿದ್ದಾಗ ಎಲ್ಲರಿಗೂ ಜ್ಞಾನದ ಬೆಳಕನ್ನು ತೋರಿದವರು. ತಾವು ಕಷ್ಟ, ನೋವು ಅನುಭವಿಸಿ ಕತ್ತಲ್ಲಿನಲ್ಲಿದ್ದವರ ಬದುಕಿನಲ್ಲಿ ಬೆಳಕು ಬರುತ್ತದೆಂಬ ಭರವಸೆ ಮೂಡಿಸಿದವರು. ಯಾವ ದೇಶದಲ್ಲಿ ದೇವಸ್ಥಾನದ ಗಂಟೆಗಿಂತ ಶಾಲೆಗಳ ಗಂಟೆ ಹೆಚ್ಚಾಗಿರುತ್ತದೆಯೋ ಆ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದರು. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕಾಗಿಲ್ಲ, ಆದರೆ ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಬೇಕು. ವಿದ್ಯಾರ್ಥಿಗಳು ಸ್ವಯಂ ಪ್ರಕಾಶ ಸೂರ್ಯವಾಗಬೇಕಾದರೆ, ಉತ್ತಮ ಜ್ಞಾನ ಪಡೆಯಬೇಕು. ಬಡತನ, ನಿರುದ್ಯೋಗ, ಅಜ್ಞಾನ ಹೊಡೆದೊಡಿಸಲು ಶಿಕ್ಷಣವೆಂಬ ಹರಿತವಾದ ಖಡ್ಗ ಉಪಯೋಗಿಸಿ ಸಾರ್ಥಕ ಬದುಕು ನಡೆಸಬೇಕು. ಜಗತ್ತಿನಲ್ಲಿ ಎಲ್ಲರಿಗೂ ಸಮಾನವಾಗಿ ಸಿಗುವದು ದಿನದ 24 ಗಂಟೆಗಳು, ಅದರ ಸದುಪಯೋಗ ಪಡಿಸಿಕೊಂಡರೆ ಶ್ರೇಷ್ಠ ಸಾಧಕರಾಗುತ್ತಾರೆ ಎಂಬುದನ್ನು ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರು ಸಾಧಿಸಿ ತೋರಿಸಿದ್ದಾರೆ. ವಿದ್ಯಾರ್ಥಿಗಳು ಅವರಂತೆ ಅಭ್ಯಾಸ ಮಾಡಬೇಕು. ಸಾಧನೆಮಾಡಿ ಸಮಾಜಕ್ಕೆ ಕೊಡುಗೆ ನೀಡಬೇಕು. ಓದುವ ಹವ್ಯಾಸ ಬೆಳೆಸಿಕೊಂಡು ಏಕಾಗ್ರತೆಯಿಂದ ಓದಬೇಕು. ಎಲ್ಲ ಮಕ್ಕಳಲ್ಲಿ ಸಾಧಿಸುವ ಶಕ್ತಿ ಇರುತ್ತದೆ. ಅದನ್ನು ಪ್ರಕಟಿಸಬೇಕು. ಸಾಧನೆಗೆ ಕಷ್ಟ, ಅವಮಾನ, ಅಪಮಾನ, ನೋವು, ಬಡತನ, ಯಾವುದೂ ಅಡ್ಡಿಯಾಗುವುದಿಲ್ಲ. ಓದಿದಾಗ ಉತ್ತಮ ಜ್ಞಾನ ಸಿಗುತ್ತದೆ. ಆಗ ಮನಸ್ಸಿನಲ್ಲಿ ಸೇವೆಯ ಜ್ಯೋತಿ ಬೆಳಗುತ್ತದೆ ಎಂದರು.
“ದೇವಸ್ಥಾನ ಕಟ್ಟಿದರೆ ಬಿಕ್ಷುಕ ಹುಟ್ಟುತ್ತಾನೆ, ಶಾಲೆ ಕಟ್ಟಿದರೆ ವಿದ್ವಾಂಸ ಹುಟ್ಟುತ್ತಾನೆ” , “ಅಜ್ಞಾನ ನಿಮ್ಮಲ್ಲಿ ಭಯವನ್ನುಂಟು ಮಾಡಿದರೆ, ಭಯ ನಿಮ್ಮಲ್ಲಿ ಅಜ್ಞಾನ ಉಂಟು ಮಾಡುತ್ತದೆ. ಈ ಎರಡನ್ನು ಓಡಿಸುವ ಏಕೈಕ ಅಸ್ತ್ರ ವಿದ್ಯೆಯಾಗಿದೆ” ಎಂದು ಡಾ. ಬಾಬಾ ಸಾಹೇಬರು ಹೇಳಿದ್ದಾರೆ ಎಂದರು. ಅವರ ಪಾಂಡಿತ್ಯ ಪ್ರತಿಭೆ, ಅಸ್ಪೃಶ್ಯರಿಗಾಗಿ ಮಾಡಿದ ಹೋರಾಟ, ಮಾನವತಾ ಗುಣಗಳು, ಸಮಾನತೆಗಾಗಿ, ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸಿದ ಶ್ರೇಷ್ಠ ವಿಚಾರಗಳು ಪ್ರಶಂಸನೀಯವಾಗಿವೆ. ಅವರು ಸಮಾಜ ಸುಧಾರಕರಾಗಿ, ರಾಜಕಾರಣಿಯಾಗಿ, ಸಂವಿಧಾನ ಶಿಲ್ಪಿಯಾಗಿ, ಅರ್ಥಶಾಸ್ತ್ರಜ್ಞರಾಗಿ, ಶಿಕ್ಷಣ ತಜ್ಞರಾಗಿ, ಶ್ರೇಷ್ಠ ಸಾಧನೆ ಮಾಡಿದ್ದಾರೆ. ಅವರದು ಸ್ವಾಭಿಮಾನದ ಬದುಕು, ಹೋರಾಟದ ಬದುಕು, ಸ್ಪೂರ್ತಿಯ ಬದುಕು ಇವು ಎಲ್ಲ ಮಕ್ಕಳಿಗೂ ಪ್ರೇರಣೆಯಾಗಲಿ. ಎಲ್ಲ ವಿದ್ಯಾರ್ಥಿಗಳು ಅವರಂತೆ ಜ್ಞಾನ ಪಡೆದು ಶ್ರೇಷ್ಠ ಸಾಧಕರಾಗಲು ಪ್ರಯತ್ನಿಸಬೇಕೆಂದು ಪ್ರೋತ್ಸಾಹಿಸಿದರು. ಕೊನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರು ಯುವ ಜನರಿಗೆ ಬರೆದ ಪತ್ರವನ್ನು ವಿದ್ಯಾರ್ಥಿಗಳು ಓದಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಂ.ಸಿ.ಕಿರೇದಳ್ಳಿ ಸ್ವಾಗತಿಸಿದರು. ಶ್ರೀ ಪ್ರಶಾಂತ ಕುಲಕರ್ಣಿ ಉಪಪ್ರಾಚಾರ್ಯರು, ಶ್ರೀ ಪ್ರಭುಗೌಡ, ಶ್ರೀ ವಿಜಯ ನಾಲವಾರ, ಶ್ರೀಮತಿ ಲಕ್ಷ್ಮೀ ಶೈಲಜಾ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು. ಲಕ್ಷ್ಮೀ ಸಂಗಡಿಗರು ಪ್ರಾರ್ಥಿಸಿದರು. ಡಾ. ವಿದ್ಯಾವತಿ ಪಾಟೀಲ ನಿರೂಪಿಸಿದರು. ಶ್ರೀಮತಿ ತ್ರಿವೇಣಿ ಉಪನ್ಯಾಸಕರು ವಂದಿಸಿದರು.