ಡಾ.ಬಿ.ಆರ್.ಅಂಬೇಡ್ಕರ್‍ರ ಮಹಾ ಪರಿನಿರ್ವಾಣ ದಿನಾಚರಣೆ

ಮೈಸೂರು, ಡಿ.6:- ಮೈಸೂರು ಜಿಲ್ಲಾಡಳಿತದ ವತಿಯಿಂದ ಸೋಮವಾರ ಪುರಭವನದ ಆವರಣದಲ್ಲಿರುವ ಡಾ. ಅಂಬೇಡ್ಕರ್ ಪ್ರತಿಮೆ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾಚರಣೆ ಆಚರಿಸಲಾಯಿತು.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಗೈದು ಗೌರವ ಸಲ್ಲಿಸಿದ, ನಂತರ ಮಾತನಾಡಿದ ಅವರು ಅಂಬೇಡ್ಕರ್ರವರು ದಲಿತರ ಪರ ಊದಿದ ಕ್ರಾಂತಿಕಾರಿ ಕಹಳೆ ದೇಶದ ಉದ್ದಗಲಕ್ಕೂ ಮೊಳಗಿ ಭಾರತವು ಸ್ವತಂತ್ರ ಗಳಿಸಿದ ನಂತರ ನೆಹರು ಸರ್ಕಾರದಲ್ಲಿ ಪ್ರಥಮ ಕಾನೂನು ಸಚಿವರಾದರು. ಇದು ಅವರಿಗೆ ಹೆಗ್ಗಳಿಕೆಯನ್ನು ಸಹ ತಂದಿತು. ಅಂಬೇಡ್ಕರ್ರವರು ದೇಶಕ್ಕೆ ನೀಡಿದ ಸಶಕ್ತ ಸಂವಿಧಾನವನ್ನು ನೀಡಿದ ಶಿಲ್ಪಿಯಾಗಿದ್ದು ಮುಂದೆ ಇದು ಇಡೀ ಜಗತ್ತಿಗೆ ಮಾದರಿ ಸಂವಿಧಾನವಾದದ್ದು ಅಂಬೇಡ್ಕರ್ ಅವರಿಗೆ ಸಂದ ಮಹಾಗೌರವದ ಸಂಗತಿ ಎಂದರು.
ಅಂಬೇಡ್ಕರ್ ಅವರಿಗೆ ಸಂಸ್ಕೃತವನ್ನು ಕಲಿಯಬೇಕೆಂಬ ಮಹದಾಸೆಯಿತ್ತು. ಆದರೆ ಇದಕ್ಕೆ ಕೆಳಜಾತಿಯವರು ಸಂಸ್ಕೃತಯನ್ನು ವ್ಯಾಸಂಗ ಮಾಡಬಾರದೆಂದು ಮೇಲ್ಜಾತಿಯವರು ಅಡ್ಡಿ ಉಂಟುಮಾಡಿದರು. ಆದರೆ ಇದಕ್ಕೆ ಅಂಬೇಡ್ಕರವರು ಜಗ್ಗದೆ ಹಟತೊಟ್ಟು ಸಂಸ್ಕೃತ ಭಾಷೆಯನ್ನು ಕಲಿತು ಅದರಲ್ಲಿ ಸಂಪೂರ್ಣ ಪಾಂಡಿತ್ಯಗಳಿಸಿ ತಾವೇ ಹಲವಾರು ವಿಚಾರಗಳನ್ನು ರಚಿಸುವುದರೊಂದಿಗೆ ಆಧುನಿಕ ಮನು ಎಂಬ ಖ್ಯಾತ ಗಳಿಸಿದರು. ಇದು ಅವರಲ್ಲಿರುವ ಅದ್ಭುತ ಶಕ್ತಿಯನ್ನು ತೋರುತ್ತದೆ ಎಂದು ಜಿಲ್ಲಾಧಿಕಾರಿ ನುಡಿದರು.
ಅಂಬೇಡ್ಕರ್ ಅವರು ಹೆಜ್ಜೆ ಇಟ್ಟಲ್ಲೆಲ್ಲಾ ಅಸ್ಪರ್ಶತೆ ನಿವಾರಣೆಗಾಗಿಯೇ ಹೋರಾಟ ಮನೋಭಾವ ಹೊಂದಿದ್ದವರಾಗಿದ್ದರು. ಹಾಗೆಯೇ ದಲಿತರ ಪುರೋಭಿವೃದ್ಧಿಗಾಗಿ ಅವರ ಜೀವ ಸದಾ ಮಿಡಿಯುತ್ತಿತ್ತು. ಇಂತಹ ವ್ಯಕ್ತಿಯನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎಂ.ಯೋಗೀಶ್, ಪಾಲಿಕೆ ಆಯುಕ್ತ ಜಿ. ಲಕ್ಷ್ಮಿಕಾಂತ್ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಮಾಲತಿ, ಮುಡಾ ಆಯುಕ್ತ ಡಾ. ಡಿ.ಬಿ.ನಟೇಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರೇಮ್ ಕುಮಾರ್, ಉಪವಿಭಾಗಾಧಿಕಾರಿ ಕಮಲಾ ಬಾಯಿ, ಮತ್ತಿತರ ಗಣ್ಯರು ಡಾ. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.