
(ಸಂಜೆವಾಣಿ ವಾರ್ತೆ)
ವಿಜಯಪುರ:ಸೆ.5:ಅಮೇರಿಕಾದ ವಾಶಿಂಗ್‍ಟನ್ ಡಿ.ಸಿ. ದಲ್ಲಿ ಮೊಟ್ಟಮೊದಲ ಬಾರಿಗೆ 2023 ಆಗಸ್ಟ್ ತಿಂಗಳಲ್ಲಿ ಜರುಗಿದ “ವಿಶ್ವ 8ನೆಯ ಪೀಡಿಯಾಟ್ರಿಕ್ ಕಾರ್ಡಿಯಾಲಾಜಿ ಮತ್ತು ಕಾರ್ಡಿಯಾಕ್ ಸರ್ಜರಿ ಸಮ್ಮೇಳನ”ದಲ್ಲಿ ಖ್ಯಾತ ಚಿಕ್ಕಮಕ್ಕಳ ತಜ್ಞರಾದ ಡಾ|| ಎಲ್.ಎಚ್.ಬಿದರಿಯವರು ಭಾಗವಹಿಸಿ ನಮ್ಮ ದೇಶದ ಟೈರ್ 3 ನಗರವಾದ ವಿಜಯಪುರದಲ್ಲಿ ಮಾಡಲಾದ 580 ಮಕ್ಕಳ ಹೃದಯಚಿಕಿತ್ಸೆ ಕುರಿತು ಪ್ರಬಂಧ ಮಂಡಿಸಿದರು. ಈ ಸಮ್ಮೇಳನದಲ್ಲಿ 101 ದೇಶಗಳಿಂದ 6,000ಕ್ಕೂ ಹೆಚ್ಚು ನೋಂದಾಯಿತ ವೈದ್ಯರು ಭಾಗವಹಿಸಿದ್ದರು ಹಾಗೂ 925 ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಲಾಯಿತು.
ಮಕ್ಕಳ ತಜ್ಞರು ಚಿಕ್ಕಮಕ್ಕಳ ಹೃದಯರೋಗಗಳನ್ನು ಕಂಡುಹಿಡಿದು ಇಕೋ ಕಾರ್ಡಿಯೋಗ್ರಾಫಿ ಮುಖಾಂತರ ಖಚಿತಪಡಿಸಿಕೊಂಡ ನಂತರ ಮಕ್ಕಳ ಹಾಗೂ ವಯಸ್ಕರ ಹಿರಿಯ ಹೃದಯ ತಜ್ಞರಾದ ಡಾ|| ಪಿ.ವ್ಹಿ.ಸುರೇಶ ಅವರ ಅಭಿಪ್ರಾಯ ಪಡೆದುಕೊಂಡು 2015 ರಿಂದ ಇಲ್ಲಿಯವರೆಗೆ 400 ಚಿಕ್ಕಮಕ್ಕಳ ಹೃದಯರಂಧ್ರಗಳನ್ನು ಉಪಕರಣದ ಮುಖಾಂತರ ಗುಣಪಡಿಸಿದ್ದಾರೆ. ಇದಲ್ಲದೆ, ಹೃದಯಶಸ್ತ್ರಚಿಕಿತ್ಸಾ ತಜ್ಞರುಗಳಾದ ಡಾ|| ಪ್ರ್ರಿಯಾಂಕ್ ಭಟ್ ಹಾಗೂ ಡಾ|| ಸುದರ್ಶನ್ ವಿಜಯಪುರಕ್ಕೆ ಬಂದು ಸುಮಾರು 180 ಮಕ್ಕಳ ಹೃದಯರಂಧ್ರಗಳನ್ನು ಮುಚ್ಚಿ ಚಿಕಿತ್ಸೆ ಮಾಡಿರುತ್ತಾರೆ. ಈ ಎಲ್ಲ 580 ಮಕ್ಕಳ ಶಸ್ತ್ರಚಿಕಿತ್ಸೆಗಳನ್ನು ಕರ್ನಾಟಕ ಸರ್ಕಾರದ ಯಶಸ್ವಿನಿ, ಆರ್.ಬಿ.ಎಸ್.ಕೆ., ಎ.ಬಿ.ಆರ್.ಕೆ. ಯೋಜನೆಗಳಡಿಯಲ್ಲಿ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಮಾಡಿದ ನಂತರ ಅಶ್ವಿನಿ ಆಸ್ಪತ್ರೆಯ ತೀವ್ರನಿಗಾ ಘಟಕದ ಡಾ|| ವಿರೇಶ ಸ್ವಾಮಿ ಹಾಗೂ ಅವರ ಪರಿಣಿತ ತಂಡವು ಕಾಳಜಿ ಮಾಡಿದ್ದಾರೆ.
ಇಷ್ಟೆಲ್ಲಾ ಕಾರ್ಡಿಯಾಕ್ ಶಸ್ತ್ರಚಿಕಿತ್ಸೆ ಹಾಗೂ ಉಪಕರಣದ ಮುಖಾಂತರ ರಂಧ್ರÀ್ರ ಮುಚ್ಚುವಿಕೆಯಲ್ಲಿ ಕೇವಲ 1.4% ರಷ್ಟು ಮಾತ್ರ ಮರಣ ಪ್ರಮಾಣವಿದ್ದು, ಗಮನ ಸೆಳೆಯುವಂಥದ್ದಾಗಿದೆ.
ಚಿಕ್ಕಮಕ್ಕಳ ಹೃದಯಚಿಕಿತ್ಸೆಯು ಆಫ್-ಸೈಟ್ ಸರ್ಜರಿಯಾಗಿದ್ದು (ಹೃದಯ ಆಸ್ಪತ್ರೆಗಳನ್ನು ಹೊರತುಪಡಿಸಿ), ಇವನ್ನು ಡಾ|| ವಿವೇಕ ಜವಳಿ, ಹಿರಿಯ ಹೃದಯರೋಗ ಶಸ್ತ್ರಚಿಕಿತ್ಸಕರ ಸಹಕಾರದೊಂದಿಗೆ ಮಾಡಲಾಗಿದೆ. ಇದೇ ತರಹದ ಆಫ್-ಸೈಟ್ ಸರ್ಜರಿಗಳನ್ನು ಇರಾಕ್ ದೇಶದ ಬಾಸ್ರಾ ನಗರದಲ್ಲಿ ಡಾ|| ವಿವೇಕ ಜವಳಿಯವರು ತಮ್ಮ ತಂಡದಿಂದ ಯಶಸ್ವಿಯಾಗಿ ಮಾಡಿದ್ದು ಇರುತ್ತದೆ. ಸಂಕೀರ್ಣವಾದ ಮಕ್ಕಳ ಹೃದಯಚಿಕಿತ್ಸೆಗಳನ್ನು ಸಮರ್ಪಣಾಭಾವದಿಂದ ಪರಿಣಿತ ತಜ್ಞರಿಂದ ಸಣ್ಣ ನಗರಗಳಲ್ಲಿ ಕೂಡ ಮೆಟ್ರೋ ನಗರದಲ್ಲಿರುವಂಥ ಸೌಲಭ್ಯಗಳನ್ನು ಒದಗಿಸಬಹುದು ಎಂಬುದಕ್ಕೆ ಇದೊಂದು ನಿದರ್ಶನ.
ಎಲ್ಲ ಮಕ್ಕಳು ತೂಕದಲ್ಲಿ 9 ಕೆಜಿ ಗಿಂತ ಮೇಲ್ಪಟ್ಟ ಮಕ್ಕಳಿದ್ದು ತೂಕ ಕಡಿಮೆ ಇದ್ದ ಮಕ್ಕಳು, ಮೇಲಿಂದ ಮೇಲೆ ನಿಮೋನಿಯಾ ಆಗುತ್ತಿದ್ದ ಮಕ್ಕಳು, ಬೆಳವಣಿಗೆ ಆಗದ ಮಕ್ಕಳ ಹೃದಯಚಿಕಿತ್ಸೆಯನ್ನು ಸರ್ಕಾರದ ಯೋಜನೆಗಳಡಿಯಲ್ಲಿ ಅಂದರೆ ಕೇವಲ ರೂ. 85,000/- ಮಾಡಲು ಸಾಧ್ಯವಾಗುವುದಿಲ್ಲ. ಅಂಥ ಮಕ್ಕಳಿಗಾಗಿ ಸರ್ಕಾರವು ಯೋಜನೆ ವೆಚ್ಚವನ್ನು ಕನಿಷ್ಟ ಮೂರು ಪಟ್ಟು ಹೆಚ್ಚಿಸಬೇಕು ಅಥವಾ ಸಿ.ಎಸ್.ಆರ್. ಫಂಡ್ / ದಾನಿಗಳ ದೇಣಿಗೆ ಮೂಲಕ ನೆರವೇರಿಸಬಹುದೆಂದು ಅಭಿಪ್ರಾಯಪಟ್ಟರು.