ಡಾ. ಬಾಬೂ ಜಗಜೀವನ್ ರಾಮ್ 116ನೇ ಜನ್ಮ ದಿನಾಚಾರಣೆ


ಬಳ್ಳಾರಿ, ಏ.05: ಡಾ. ಬಾಬು ಜಗಜೀವನ್ ರಾಮ್ ಜ್ಞಾನ ಮತ್ತು ವ್ಯಾಪಕ ದೃಷ್ಟಿಯಿಂದ ತಮ್ಮ ಬದುಕಿನ ಉದ್ದಕ್ಕೂ ಎಲ್ಲಾ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ರಾಬರ್ಟ್ ಜೋಶ್ ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ. ಬಾಬೂ ಜಗಜೀವನ್ ರಾಮ್ ಅವರ 116ನೇ ಜನ್ಮ ದಿನಾಚಾರಣೆ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಅವರು ಮಾತನಾಡುತ್ತಾ ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವಲ್ಲಿ ಮಹಾತ್ಮ ಗಾಂಧೀಜಿ, ಡಾ ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬೂ ಜಗಜೀವನ್ ರಾಮ್ ಕೊಡುಗೆಗಳು ಅಪಾರವಾಗಿವೆ. ಬಾಬು ಜಗಜೀವನ್ ರಾಮ್ ಸಮಾಜದಲ್ಲಿ ಬದಲಾವಣೆಗಾಗಿ ವ್ಯವಸ್ಥೆಯೊಂದನ್ನು ರೂಪಿಸುವ ಮೂಲಕ ರಾಷ್ಟ್ರದ ಕಲ್ಪನೆಯನ್ನು ಮೂಡಿಸಿದ್ದರು. ಸ್ವಾತಂತ್ರ್ಯ ಚಳುವಳಿ, ಹಿಂದುಳಿದ ವರ್ಗಗಳಿಗೆ ಶ್ರಮಿಸಲು ಸಾಮಾಜಿಕ ಸುಧಾರಣೆ, ಹಸಿರು ಕ್ರಾಂತಿ ಹಲವಾರು ಕ್ಷೇತ್ರಗಳ ಅಭಿವೃದ್ಧಿಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು ಎಂದು ಹೇಳಿದರು.
ಈ ಕಾರ್ಯಕ್ರದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿಯ ಕುಲಪತಿಯಾದ ಪ್ರೊ. ಸಿದ್ದು ಪಿ. ಆಲಗೂರ ಮಾತನಾಡಿ, ಡಾ. ಬಾಬೂ ಜಗಜೀವನ್ ರಾಮ್ ಅವರ ವಿಚಾರಗಳು ಅವಿಸ್ಮರಣೀಯವಾಗಿವೆ. ಅಖಿಲ ಭಾರತ ರವಿದಾಸ ಮಹಾಸಭಾ ಸಂಘಟನೆಯ ನೇತೃತ್ವ ವಹಿಸಿ, ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಬಾಬೂಜೀ ನಿರ್ವಹಿಸಿದ ಖಾತೆಗಳಿಲ್ಲ. ಅವರು ಸ್ಪರ್ಧಿಸಿದ ಚುನಾವಣೆಗಳಲ್ಲಿ ಸೋತ್ತಿಲ್ಲ. ಡಾ. ಬಾಬೂ ಜಗಜೀವನ್ ರಾಮ್ ಧೈರ್ಯ, ತಟಸ್ಥ ಹಾಗೂ ಹೋರಾಟದ ಮನೋಭಾವದ ಗುಣಗಳು ಯುವ ಜನಾಂಗಕ್ಕೆ ಮಾರ್ಗದರ್ಶಕವಾಗಲಿ ಎಂದರು.
ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸಂಯೋಜಕರಾದ ಡಾ. ಹೆಚ್. ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಬಾಬೂಜಿಯವರು ದಲಿತ ಸಮುದಾಯ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದರು.
ಈ ಸಂದರ್ಭದಲ್ಲಿ ವಿವಿಯ ಕುಲಸಚಿವರಾದ ಪ್ರೊ. ಎಸ್ ಸಿ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಹೆಚ್. ತಿಪ್ಪೇಸ್ವಾಮಿ ಅತಿಥಿಗಳನ್ನು ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಸಂತೋಷಕುಮಾರ ವಂದಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.