ಡಾ.ಬಾಬು ಜಗಜೀವನ ರಾಮ ಅವರ ವಿಚಾರಗಳು ಅವಿಸ್ಮರಣೀಯ :ಮಹಾದೇವ ಬಿರಾದಾರ

ಅಥಣಿ :ಎ.6: ಸಮಾಜದಲ್ಲಿನ ಅಸ್ಪಶ್ಯತೆಯನ್ನು ತೊಡೆದು ಹಾಕಿ ಎಲ್ಲರಲ್ಲೂ ಸಮಾನತೆ ತರುವಲ್ಲಿ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಂ ಕೊಡುಗೆಗಳು ಅಪಾರವಾಗಿವೆ ಎಂದು ಬೆಳಗಾವಿ ಜಿಪಂ ಯೋಜನಾ ಅಧಿಕಾರಿ ರವೀಂದ್ರ ಬಂಗಾರೆಪ್ಪನವರ ಹೇಳಿದರು.
ಅವರು ಬುಧವಾರ ಪಟ್ಟಣದ ಲಿಡ್ಕರ್ ಕಾಲೋನಿಯಲ್ಲಿ ತಾಲೂಕ ಆಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತು ಅಥಣಿ ಪುರಸಭೆ ವತಿಯಿಂದ ಆಯೋಜಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ ಅವರ 116ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಾಬೂಜಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಡಾ. ಬಾಬು ಜಗಜೀವನ್ ರಾಮ ಅವರು ದೇಶದ ನೆಚ್ಚಿನ ಉಪ ಪ್ರಧಾನಮಂತ್ರಿಗಳಾಗುವ ಮೂಲಕ ಸಮಾಜದಲ್ಲಿ ಬದಲಾವಣೆಗಾಗಿ ವ್ಯವಸ್ಥೆಯೊಂದನ್ನು ರೂಪಿಸುವ ಮೂಲಕ ರಾಷ್ಟ್ರದ ಕಲ್ಪನೆಯನ್ನು ಮೂಡಿಸಿದ್ದರು. ಸ್ವಾತಂತ್ರ್ಯ ಚಳುವಳಿ, ಹಿಂದುಳಿದ ವರ್ಗಗಳಿಗೆ ಶ್ರಮಿಸಲು ಸಾಮಾಜಿಕ ಸುಧಾರಣೆ, ಹಸಿರು ಕ್ರಾಂತಿ ಹಲವಾರು ಕ್ಷೇತ್ರಗಳ ಅಭಿವೃದ್ಧಿಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಉಪ ತಹಶೀಲ್ದಾರ ಮಹಾದೇವ ಬಿರಾದಾರ ಮಾತನಾಡಿ ಡಾ.ಬಾಬು ಜಗಜೀವನ್ ರಾಮ್ ಅವರ ವಿಚಾರಗಳು ಅವಿಸ್ಮರಣೀಯವಾಗಿವೆ. ಸಾಮಾಜಿಕ ನ್ಯಾಯದ ಪ್ರತಿಪಾದಕರು, ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಅವರ ಧೈರ್ಯ, ತಟಸ್ಥ ಹಾಗೂ ಹೋರಾಟದ ಮನೋಭಾವದ ಗುಣಗಳು ಯುವ ಜನಾಂಗಕ್ಕೆ ಮಾರ್ಗದರ್ಶಕವಾಗಲಿ ಎಂದರು.
ತಾಲೂಕ ಸಮಾಜ ಕಲ್ಯಾಣ ಅಧಿಕಾರಿ ಪ್ರವೀಣ ಪಾಟೀಲ ಮಾತನಾಡಿ ಡಾ. ಬಾಬು ಜಗಜೀವನ್ ರಾಮ್ ದಲಿತ ಸಮುದಾಯ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು. ಕೇಂದ್ರ ಸರ್ಕಾರದಲ್ಲಿ ಅನೇಕ ಸಚಿವ ಹುದ್ದೆಗಳನ್ನು ನಿರ್ವಹಿಸಿದ ಅವರು ಉಪ ಪ್ರಧಾನಿಗಾಗಿ ಶೋಷಿತ ವರ್ಗದ ಅಭಿವೃದ್ಧಿಗಾಗಿ ಮತ್ತು ಸಮಾಜದಲ್ಲಿ ಸಮಾನತೆಗಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರ ಜನ್ಮದಿನಾಚರಣೆಯ ಈ ಸಂದರ್ಭದಲ್ಲಿ ಅವರ ಸಾಧನೆಯನ್ನ ಸ್ಮರಿಸುವುದರ ಜೊತೆಗೆ ಅವರ ಆದರ್ಶ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವುದು ಅಗತ್ಯವಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿ ದೇಶದಲ್ಲಿ ಬಡತನ ತಾಂಡವಾಡುತ್ತಿದ್ದ ಅಂದಿನ ಸಂದರ್ಭದಲ್ಲಿ ಅನೇಕ ಹೋರಾಟ ಮತ್ತು ಸಾಧನೆಗಳನ್ನು ಮಾಡುವ ಮೂಲಕ ಡಾ. ಬಾಬೂಜಿ ಅವರು ಹಸಿರು ಕ್ರಾಂತಿಯ ಹರಿಕಾರ ಎನಿಸಿಕೊಂಡರು. ಇತ್ತೀಚಿಗೆ ಹುಟ್ಟಿದ ಯುವಕರಿಗೆ ಹಸಿವಿನ ಬೆಲೆ ಗೊತ್ತಿಲ್ಲ. ಡಾ. ಬಾಬು ಜಗಜೀವನ್ ರವರ ಜೀವನವನ್ನ ತಿಳಿದಾಗ ಅದರ ಮಹತ್ವ ಗೊತ್ತಾಗುತ್ತದೆ. ಅಂತಹ ಶಿಕ್ಷಣ ಮತ್ತು ಸಂಸ್ಕಾರವನ್ನ ನಮ್ಮ ಮಕ್ಕಳಿಗೆ ನಾವು ಇಂದು ಕಲಿಸಿಕೊಡುವುದು ಅಗತ್ಯ ಇದೆ ಎಂದು ಹೇಳಿದರು.
ಈ ಸಮಾರಂಭದಲ್ಲಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎ??? ಶಿವಶಂಕರ ಮುಕರಿ, ತಾ.ಪಂ ಅಧಿಕಾರಿ ವೀರಣ್ಣಾ ವಾಲಿ, ಪುರಸಭೆ ಮುಖ್ಯಾಧಿಕಾರಿ ಈರಣ್ಣಾ ದಡ್ಡಿ, ಸಿಡಿಪಿಒ ಅಶೋಕ ಕಾಂಬಳೆ, ತಾಲೂಕಾ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಜೆ. ಎ ಹಿರೇಮಠ, ತೋಟಗಾರಿಕೆ ಇಲಾಖೆಯ ಅಧಿಕಾರಿ ಶ್ವೇತಾ ಹಾಡಕಾರ, ಸಣ್ಣ ನೀರಾವರಿ ಅಭಿಯಂತರ ಶ್ರೀಕಾಂತ ಮಾಕಾಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.