ಡಾ. ಬಾಬು ಜಗಜೀವನ್ ರಾಮ್‍ರ ಆದರ್ಶ ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ ಪಿ. ಸುನಿಲ್‍ಕುಮಾರ್

ವಿಜಯಪುರ, ಏ.6-ದೇಶದ ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ದಿ. ಡಾ. ಬಾಬು ಜಗಜೀವನ್ ರಾಮ್ ಅವರ ಆದರ್ಶ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ಪ್ರಜೆಗಳಾಗಿ ದೇಶಕ್ಕೆ ಕೊಡುಗೆಯನ್ನು ನೀಡುವಂತೆ ಜಿಲ್ಲಾಧಿಕಾರಿ ಪಿ. ಸುನಿಲ್‍ಕುಮಾರ್ ಸಾರ್ವಜನಿಕರಿಗೆ ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯ ಸಭಾಂಗಣದಲ್ಲಿ ಇಂದು ಡಾ.ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ, ಡಾ.ಬಾಬು ಜಗಜೀವನ್ ರಾಮ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಜ್ಯೋತಿ ಬೆಳಗಿಸಿ ಮಾತನಾಡಿದ ಅವರು
ಡಾ.ಬಾಬು ಜಗಜೀವನ್ ರಾಮ್ ಅವರು ಇಂದಿನ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಸಮಾಜಕ್ಕೆ ಅವರು ನೀಡಿದ ಕೊಡುಗೆ ಅಪಾರ. ಸಮಾಜದ ಸೇವಕರಾಗಿ,ಅವರು ನಡೆದ ದಾರಿಯೇ ನಮಗೆ ದಾರಿದೀಪ ಅವರ ಸಿದ್ಧಾಂತಗಳನ್ನು ಪಾಲನೆ ಮಾಡಬೇಕೆಂದು ಅವರು ತಿಳಿಸಿದರು.
ಡಾ.ಬಾಬು ಜಗಜೀವನ್ ರಾಮ ಅವರ ನಡೆ ನುಡಿ, ಅವರ ಸಮಾಜಸೇವೆಯನ್ನು ಅರ್ಥಮಾಡಿಕೊಂಡು ನಡೆದಿದ್ದೆ ಆದರೆ ನಾವು ನಮ್ಮ ಜೀವನದಲ್ಲಿ ಯಶಸ್ವಿಯಾಗುತ್ತೇವೆ.ಅವರ ಸಾಧನೆಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಬೇಕೆಂದು ಅವರು ಹೇಳಿದರು.
ಇಂದಿನ ಯುವಕರು ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಇದು ತಿಳಿದುಕೊಂಡಿದ್ದೆ ಆದರೆ ಒಳ್ಳೆಯ ನಾಗರಿಕನಾಗಲು ಸಾಧ್ಯವೆಂದು ತಿಳಿಸಿ, ನಿರುದ್ಯೋಗ ಯುವಕರು ಸರ್ಕಾರಿ ಉದ್ಯೋಗ ಮಾತ್ರ ಉದ್ಯೋಗವಲ್ಲ. ನಾವು ನಮ್ಮ ಉಪಜೀವನಕ್ಕಾಗಿ ಮಾಡುವ ಕೆಲಸವು ಉದ್ಯೋಗವೇ ಆಗಿದೆ. ನಾವು ನಮ್ಮ ಜೀವನದಲ್ಲಿ ಮಾಡುವ ಪ್ರತಿಯೊಂದು ಕೆಲಸವನ್ನು ಪ್ರಾಮಾಣಿಕತೆಯಿಂದ, ಪ್ರೀತಿಯಿಂದ ಮಾಡಿದರೆ ನಾವು ಯಶಸ್ವಿಯಾಗುತ್ತೇವೆ ಎಂದು ಅವರು ತಿಳಿಸಿದರು.
ಯುವಕರು ಸಮಯ ಹಾಳು ಮಾಡದೆ ಇಂಥ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಂಡು ಅವರನ್ನು ಅರ್ಥಮಾಡಿಕೊಂಡು ಅವರ ಜೀವನ ಆದರ್ಶಗಳನ್ನು ಬದುಕಿನುದ್ದಕ್ಕೂ ಅಳವಡಿಸಬೇಕೆಂದು ಯುವಕರಿಗೆ ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ್ ರೆಡ್ಡಿ, ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ, ಮಹಾನಗರಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಉಪವಿಭಾಗಾಧಿಕಾರಿ ಬಲರಾಮ್ ಲಮಾಣಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ, ದಲಿತ ಸಂಘರ್ಷ ಸಮಿತಿ ಸಂಚಾಲಕರು ಸಿದ್ದು ರಾಯಣ್ಣನವರ, ರಾಜ್ಯ ಸಂಘಟನಾ ಸಂಚಾಲಕ ರಮೇಶ ಆಸಂಗಿ, ದಲಿತ ಮುಖಂಡ ರಾಜು ತೊರವಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.