ಡಾ.ಬಾಬು ಜಗಜೀವನ್‍ರಾಮ್ ಅವರ ಸಂದೇಶ ಅಳವಡಿಸಿಕೊಳ್ಳಲು ಜಿಲ್ಲಾಧಿಕಾರಿ ಸಲಹೆ

ಚಾಮರಾಜನಗರ, ಏ.06:- ಹಸಿರು ಕ್ರಾಂತಿಯ ಹರಿಕಾರಡಾ. ಬಾಬು ಜಗಜೀವನ್ ರಾಮ್ ಅವರ ಸಂದೇಶ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ನಿಷ್ಠೆಯಿಂದ ಮುನ್ನಡೆಯಬೇಕು. ಅವರು ರಾಷ್ಟ್ರಕ್ಕೆ ನೀಡಿದಕೊಡುಗೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಿ. ಎಸ್. ರಮೇಶ್ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವಜೆ. ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಮ್‍ರವರ 116ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಡಾ. ಬಾಬು ಜಗಜೀವನ್‍ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಮಹನೀಯರೆಲ್ಲರೂ ಒಂದೇ ನೆಲೆಗಟ್ಟಿನಲ್ಲಿ ಚಿಂತಿಸಿದಂತವರು. ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಜೀವಿಸಬೇಕು ಎಂದು ಅಂದಿನ ದಿನಗಳಲ್ಲಿ ಹೋರಾಡಿದವರು. ಅವರ ಪರಿಕಲ್ಪನೆ, ತತ್ವಗಳನ್ನು ಶ್ರದ್ದೆಯಿಂದ ಪಾಲಿಸಬೇಕು. ಸಮುದಾಯ ಉಳಿವಿಗೆ ಬಾಬು ಜಗಜೀವನ್ ರಾಮ್ ಅವರ ಹೋರಾಟದ ಹಾದಿಯನ್ನು ಅರ್ಥಮಾಡಿಕೊಂಡು ಜೀವನ ಮುನ್ನಡೆಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. ಎಲ್ಲಾ ಸಮುದಾಯದವರಿಗೆ ಸಮಾನ ಸಾಮಾಜಿಕ ಗೌರವ ದೊರಕುವಂತಾಗಬೇಕು. ಆಗ ಬಾಬು ಜಗಜೀವನ್ ರಾಮ್ ಅಂತಹ ರಾಷ್ಟ್ರ ನಾಯಕರ ಜಯಂತಿಗಳ ಆಚರಣೆ ಅರ್ಥ ಬರುತ್ತದೆ ಎಂದು ಜಿಲ್ಲಾಧಿಕಾರಿ ಡಿ. ಎಸ್. ರಮೇಶ್ ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕ ಮಲ್ಲಿಕಾರ್ಜುನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ನಗರಸಭೆಯ ಆಯುಕ್ತ ಎಸ್.ವಿ. ರಾಮ್‍ದಾಸ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ, ಇತರೆ ಗಣ್ಯರು ಮಾಲಾರ್ಪಣೆ ಮಾಡಿದರು.