ಡಾ.ಬಾಬು ಜಗಜೀವನರಾಮ ಜಯಂತ್ಯೋತ್ಸವ ಸರಳವಾಗಿ ಆಚರಿಸಲು ನಿರ್ಧಾರ

ಚಿಂಚೋಳಿ,ಏ.2-ಇಲ್ಲಿನ ತಹಸಿಲ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ವತಿಯಿಂದ ಏಪ್ರಿಲ್ 5ರಂದು ನಡೆಯಲಿರುವ ಡಾ. ಬಾಬು ಜಗಜೀವನರಾಂ ಜಯಂತೋತ್ಸವ ಅಂಗವಾಗಿ ಪೂರ್ವಭಾವಿ ಸಭೆ ನಡೆಯಿತು.
ತಹಸಿಲ್ದಾರ ಅರುಣ ಕುಲಕರ್ಣಿ ಅವರು ಮಾತನಾಡಿ, “ರಾಜ್ಯದಲ್ಲಿ ದಿನದಿನಕ್ಕೆ ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವುದರಿಂದ ಸರ್ಕಾರ ಮತ್ತು ಜಿಲ್ಲಾ ಆಡಳಿತದ ಆದೇಶದಂತೆ ಡಾ.ಬಾಬು ಜಗಜೀವನರಾಂ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಗುವುದು. ಏಪ್ರಿಲ್ 5 ರಂದು ಬೆಳಗ್ಗೆ 9 ಗಂಟೆಗೆ ಬೀದರ್ ಕ್ರಾಸಿನಲ್ಲಿರುವ ಡಾ. ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮುಖಾಂತರ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅನೀಲಕುಮಾರ ರಾಠೋಡ, ಚಿಂಚೋಳಿಯ ಉಪ ವಿಭಾಗ ಜಿಲ್ಲಾ ಪಂಚಾಯತ ಅಧಿಕಾರಿ ಮಹಮ್ಮದ ಹುಸೇನ್, ಶಿಶು ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಭುಲಿಂಗ,ಸಿಪಿಐ ಮಹಾಂತೇಶ ಪಾಟೀಲ, ಸುಲೇಪೇಟ ಸಿಪಿಐ ಜಗದೀಶ ಕೆಜಿ, ತಾಲೂಕ ಆರೋಗ್ಯ ಅಧಿಕಾರಿ ಡಾ.ಮಹಮ್ಮದ್ ಗಫಾರ, ಕ್ಷೇತ್ರ ಶಿಕ್ಷಣ ಇಲಾಖೆಯ ಅಧಿಕಾರಿ ನಾಗಶೆಟ್ಟಿ ಭದ್ರಶೆಟ್ಟಿ, ಗ್ರೇಡ್-2 ತಹಸಿಲ್ದಾರ್ ವೆಂಕಟೇಶ ದುಗ್ಗನ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಪಕ್ಷದ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.