ಡಾ.ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಅಪಮಾನ ಖಂಡಿಸಿ ಪ್ರತಿಭಟನೆ

ಕಲಬುರಗಿ,ಜು.25-ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಖಾಜಾ ಕೋಟನೂರ ಗ್ರಾಮದಲ್ಲಿ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ ಭಾವಚಿತ್ರವಿರುವ ನಾಮಫಲಕವನ್ನು ಕಿಡಿಗೇಡಿಗಳು ಹರಿದು ಹಾಕಿ ಅಪಮಾನ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಮಾದಿಗ ಸಮಾಜದ ವಿವಿಧ ಸಂಘಟನೆಗಳ ಮಹಾ ಒಕ್ಕೂಟದ ಮುಖಂಡರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನಿನ ಪ್ರಕಾರ ಸೂಕ್ತ ಕ್ರಜ ಜರುಗಿಸಬೇಕು, ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಗುಲಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಸಿಪಿಐ ಅವರು ಡಾ.ಬಾಬು ಜಗಜೀವನರಾಮ್ ಅವರ ಭಾವಚಿತ್ರವಿರುವ ಹೊಸ ನಾಮಫಲಕವನ್ನು ಅಳವಡಿಸುವುದರ ಮೂಲಕ ಪರಿಸ್ಥಿತಿಯನ್ನು ಶಾಂತಗೊಳಿಸಿದರು. ನಂತರ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದರು.
ಜಿಲ್ಲಾ ಮಾದಿಗ ಸಮಾಜದ ಮುಖಂಡ ದಶರಥ ಎಂ.ಕಲಗುರ್ತಿ, ಮಾದಿಗ ದಂಡೋರ ರಾಜ್ಯ ಯುವ ಘಟಕದ ಅಧ್ಯಕ್ಷ ಗುರು ಭಂಡಾರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರಕಾಶ ಮಾಳಗೆ, ಕರ್ನಾಟಕ ರಾಜ್ಯ ಮಾದಿಗ ಸಮಾಜದ ಕಲಬುರಗಿ ವಿಭಾಗೀಯ ಅಧ್ಯಕ್ಷ ಚಂದ್ರಕಾಂತ ಕೆ.ನಾಟಿಕಾರ, ಕಲಬುರಗಿ ಜಿಲ್ಲಾಧ್ಯಕ್ಷ ಸಿದ್ದಲಿಂಗ ಸಿ.ಕಟ್ಟಿಮನಿ, ಡಾ.ಬಾಬು ಜಗಜೀವನರಾಮ್ ಹೋರಾಟ ಸಮಿತಿ ಮುಖಂಡರಾದ ರಾಜು ಕಟ್ಟಿಮನಿ ಸಚಿನ್ ಕಟ್ಟಿಮನಿ, ಮಹೇಶ ತಾಡಪಳ್ಳಿ ಮತ್ತು ಜಿಲ್ಲಾ ಮಾದಿಗ ಸಮಾಜದ ಮುಖಂಡರು ಹಾಗೂ ಗ್ರಾಮದ ಮಾದಿಗ ಸಮಾಜದ ಮುಖಂಡರು ಉಪಸ್ಥಿತರಿದ್ದರು.