ಡಾ.ಬಾಬು ಜಗಜೀವನರಾಮ್, ಡಾ.ಬಾಬಾಸಾಹೇಬ್ಅಂಬೇಡ್ಕರ ಜಯಂತಿ: ಸರಳ ಆಚರಣೆಗೆ ನಿರ್ಣಯ

ಬೀದರ ಏ.2: ಕೋವಿಡ್-19, ಬಸವಕಲ್ಯಾಣ ಉಪ ಚುನಾವಣೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಡಾ.ಬಾಬು ಜಗಜೀವನರಾಮ್, ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ಜಯಂತಿಗಳನ್ನು ನಿಯಮಗಳ ಪಾಲನೆಯೊಂದಿಗೆ ಸರಳವಾಗಿ ಆಚರಣೆ ಮಾಡಲು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 1 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ ಅವರೊಂದಿಗೆ ನಮಗೆ ಭಾವನಾತ್ಮಕ ಸಂಬಂಧವಿದೆ. ಹೀಗಾಗಿ ಜಯಂತಿ ಆಚರಣೆಗೆ ಹೆಚ್ಚಿನ ನಿಬರ್ಂಧನೆಗಳನ್ನು ಹಾಕಬೇಡಿ ಎಂದು ಸಭೆಯಲ್ಲಿ ಮುಖಂಡರಾದ ಅನಿಲ್ ಬೆಲ್ದಾರ, ಮಾರುತಿ ಬೌದ್ದೆ ಹಾಗೂ ಇನ್ನೀತರು ಕೋರಿದರು.
ಕೋವಿಡ್-19 ಎರಡನೇ ಅಲೆ ತೀವ್ರಗೊಳ್ಳುತ್ತಿದೆ. ಏನಾದರು ಮಾಡಿ ಕೋವಿಡ್ ಪ್ರಕರಣಗಳನ್ನು ಕಡಿಮೆ ಮಾಡಿ ಎಂದು ಬಹಳಷ್ಟು ಜನರು ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಜಯಂತಿಯನ್ನು ಕೋವಿಡ್ ಮಾರ್ಗಸೂಚಿಯನುಸಾರ ಸರಳವಾಗಿ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕಿದೆ ಎಂದು ಇದೆ ವೇಳೆಯಲ್ಲಿ ಜಿಲ್ಲಾಧಿಕಾರಿಗಳು ಎಲ್ಲ ಮುಖಂಡರಲ್ಲಿ ಮನವಿ ಮಾಡಿದರು.
ಸಾಂಪ್ರದಾಯಿಕ ವಾದ್ಯಗಳ ಬಳಕೆಗೆ ಆದ್ಯತೆ ನೀಡಿ: ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್. ಅವರು ಮಾತನಾಡಿ, ಈಗಾಗಲೇ ನಿಷೇಧ ಹೇರಲಾಗಿರುವ ಡಿ.ಜೆಗೆ ಬಳಕೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಸಾಂಪ್ರದಾಯಿಕ ವಾದ್ಯಗಳನ್ನು ಬಳಸುವುದರಿಂದ ಜಯಂತಿ ಆಚರಣೆಯು ಮತ್ತಷ್ಟು ಅರ್ಥಪೂರ್ಣವಾಗಲಿದೆ ಎಂದು ತಿಳಿಸಿದರು.
ಚುನಾವಣೆ ನೀತಿ ಸಂಹಿತೆ ಪಾಲನೆಯಾಗಲಿ: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ಜಯಂತಿ ಆಚರಣೆಗೆ ಕ್ರಮ ವಹಿಸಬೇಕಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಏಪ್ರೀಲ್ 14ರಂದು ಬೆಳಗ್ಗೆ 9ಕ್ಕೆ ಡಾ.ಅಂಬೇಡ್ಕರ ವೃತ್ತದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ಬಳಿಕ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಾ.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದರು.
ಡಾ.ಬಾಬು ಜಗಜೀವನರಾಂ ಜಯಂತಿ: ಅದೇ ರೀತಿ ಏಪ್ರೀಲ್ 5ರಂದು ಡಾ.ಬಾಬು ಜಗಜೀವನರಾಮ ಜಯಂತಿ ದಿನದಂದು ಬೆಳಗ್ಗೆ 9 ಗಂಟೆಗೆ ಕರ್ನಾಟಕ ಕಾಲೇಜು ಬಳಿ ಇರುವ ಡಾ.ಜಗಜೀವನರಾಮ ಅವರ ಪುತ್ಥಳಿಗೆ ಪುಷ್ಪಾರ್ಪನೆ ಸಲ್ಲಿಸಿದ ಬಳಿಕ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕೋವಿಡ್ ಲಸಿಕೆ ನೀಡಿಕೆಗೆ ಸಹಕರಿಸಿ: ಪ್ರತಿಯೊಬ್ಬರೂ ಕೊವಿಡ್ ನಿಂದ ರಕ್ಷಣೆ ಪಡೆಯಲು ಲಸಿಕೆ ಪಡೆಯಬೇಕಿದೆ. ಹೀಗಾಗಿ ಈ ಜಯಂತಿಗಳ ಆಚರಣೆ ಸಂದರ್ಭದಲ್ಲೂ ಕೋವಿಡ್ ಲಸಿಕೆ ನೀಡಿಕೆ ಕಾರ್ಯ ನಡೆಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಎಲ್ಲ ಸಂಘಟಿಕರು ಒಟ್ಟಾಗಿ ಸೇರಿ ಕೊವಿಡ್ ಲಸಿಕೆ ನೀಡಿಕೆ ಕಾರ್ಯವನ್ನು ಚಳುವಳಿಯ ರೂಪದಲ್ಲಿ ನಡೆಸಲುವ ಸಹಕರಿಸಬೇಕು ಎಂದು ಇದೆ ವೇಳೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್. ಅವರು ಎಲ್ಲ ಮುಖಂಡರಲ್ಲಿ ಕೋರಿದರು.
ಪರಿವರ್ತನಾ ತಿಂಗಳು ಆಚರಣೆ: ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ ಅವರ ಜನ್ಮದಿನಾಚರಣೆ ಅಂಗವಾಗಿ ನಿರ್ದಿಷ್ಟವಾದ ಕಾರ್ಯಚಟುವಟಿಕೆಗಳನ್ನು ರಾಜ್ಯ, ಜಿಲ್ಲಾ ಹಾಗೂ ತಾಲೂಕುಮಟ್ಟದಲ್ಲಿ ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಾಗೂ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಸಲುವಾಗಿ ಪರಿವರ್ತನಾ ತಿಂಗಳು ಎಂಬುದಾಗಿ ಆಚರಿಸಲು ತಿಳಿಸಲಾಗಿದೆ. ಭಾರತ ಸಂವಿಧಾನ ಕುರಿತು ದೂರದರ್ಶನ ಮೂಲಕ ಚಿತ್ರೀಕರಣಗೊಂಡಿರುವ ಸಂವಿಧಾನ ಕಿರು ಚಲನಚಿತ್ರವನ್ನು ವಿದ್ಯಾರ್ಥಿ ನಿಲಯಗಳಲ್ಲಿ ಪ್ರದರ್ಶಿಸಲು ತಿಳಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ವಿಜಯಲಕ್ಷ್ಮಿ ಅವರು ಸಭೆಗೆ ಮಾಹಿತಿ ನೀಡಿದರು. ವಿದ್ಯಾರ್ಥಿ ನಿಲಯಗಳಲ್ಲಿ ಇದಕ್ಕೆ ಅಗತ್ಯ ಏರ್ಪಾಟು ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಮುಖಂಡರಾದ ಚಂದ್ರಕಾಂತ ಹಿಪ್ಪಳಗಾಂವ್, ಅರುಣ್ ಪಾಟೀಲ, ವಿಜಯಕುಮಾರ ಸೋನಾರೆ, ರಮೇಶ ಪಾಸ್ವಾನ್, ಮಹೇಶ ಗೋರನಾಳಕರ, ಪ್ರದೀಪ್ ನಾಟೀಕರ್, ನಾಗೇಂದ್ರ ದಂಡೆ, ಬಾಬು ಪಾಸ್ವಾನ್, ರಾಜು ಬನ್ನೇರ, ವಿನೋದ ಅಪ್ಪೆ, ಅಬಿ ಕಾಳೆ ಹಾಗೂ ಇನ್ನೀತರರು ಇದ್ದರು.