ಡಾ.ಬಾಬು ಜಗಜೀವನರಾಮ್ ಆದರ್ಶ ಅಳವಡಿಸಲು ಕರೆ

ಬಾಗಲಕೋಟೆ, ಏ6: ಕೃಷಿಯಲ್ಲಿ ಹಸಿರು ಕ್ರಾಂತಿ ತಂದ ನಾಯಕ ಹಾಗೂ ಭಾರತದ ಉಪಪ್ರಧಾನಿಯಾಗಿ ಆಡಳಿತ ನೀಡಿದ ಡಾ.ಬಾಬು ಜಗಜೀವನರಾಂರು ಒಂದು ಜಾತಿಗೆ ಸೀಮಿತವಲ್ಲ ಅವರು ಇಡೀ ಭಾರತಕ್ಕೆ ಸೀಮಿತವಾಗಿದ್ದಾರೆ ಎಂದು ಶಾಸಕರು ಹಾಗೂ ಬಿಟಿಡಿಎ ಅಧ್ಯಕ್ಷರಾದ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಬಾಬು ಜಗಜೀವನ್‍ರಾಂ ಅವರ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾಯಕರ ಜಯಂತಿಯನ್ನು ಕೇವಲ ಆಚರಣೆ ಮಾಡುವುದು ಆಗಬಾರದು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಅಂಬೇಡ್ಕರ, ಜಗಜೀವನರಾಂ ಅವರ ಹೆಸರು ಹೇಳುತ್ತೇವೆ ಆದರೆ ಅವರ ಶೇ,1ರಷ್ಟಾದರು ಅವರ ಮಾರ್ಗದರ್ಶನದಲ್ಲಿ ನಡೆಯುವಂತಾಗಬೇಕು ಎಂದು ಹೇಳಿದರು.
ಮಾಜಿ ಶಾಸಕ ಪಿ.ಎಚ್.ಪೂಜಾರ ಮಾತನಾಡಿ, ಬಾಬು ಜಗಜೀವನರಾಂರು ಒಬ್ಬ ಅದ್ವಿತೀಯ ನಾಯಕ, ರಾಜಕೀಯ ಚರಿತ್ರೆಯಲ್ಲಿ ಬೆಳಗಿದ ಅಗ್ರಗಣ್ಯ ನಾಯಕರಾಗಿದ್ದಾರೆ. ತುಳಿತಕ್ಕೆ ಒಳಗಾದಂತಹ ಸಮಾಜದ ಅಭಿವೃದ್ಧಿಗೆ ಹಾಗೂ ಸಮಾಜದಲ್ಲಿ ಎಲ್ಲರಂತೆ ಅವರನ್ನು ಕಾಣುವಂತೆ ಆಗಬೇಕು. ಎಲ್ಲ ಸೌಲಭ್ಯಗಳು ಅವರಿಗೆ ದೊರೆಯಬೇಕು ಎಂದು ಆಡಳಿತ ನಡೆಸಿದ ನಾಯಕರ ಆದರ್ಶಗಳನ್ನು ಇಂದಿನ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಬಿಟಿಡಿಎ ಸದಸ್ಯ ಶಿವಾನಂದ ಟವಳಿ ಮಾತನಾಡಿದರು. ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬುಡಾ ಸದಸ್ಯ ಗುಂಡು ಸಿಂಧೆ, ಯಲ್ಲಪ್ಪ ಬೆಂಡಿಗೇರಿ, ನಗರಸಭೆ ಸದಸ್ಯ ನಾರಾಯಣಿ ಇದ್ದರು.