ಡಾ ಬಾಬಾಸಾಹೇಬ ಅಂಬೇಡ್ಕರ್ ವಿಶ್ವಜ್ಞಾನಿ :ಡಾ ಐಹೊಳ್ಳಿ

ವಿಜಯಪುರ :ಎ.15:ಡಾ ಬಿ ಆರ್ ಅಂಬೇಡ್ಕರ್ ವಿಶ್ವದ ಜ್ಞಾನಿಗಳಲ್ಲಿ ಒಬ್ಬರು. 14ನೇ ಎಪ್ರಿಲ್ 1891 ರಲ್ಲಿ ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪಿನಲ್ಲಿ ಹುಟ್ಟಿದರು. ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲೂಕಿನ ಅಂಬೇವಾಡ ಗ್ರಾಮದವರು. ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು ಎಂದು ವಿಶ್ರಾಂತ ಪ್ರಾಚಾರ್ಯ ಡಾ ವ್ಹಿ ಡಿ ಐಹೊಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಜರುಗಿದ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ 132ನೇಯ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡುತ್ತಾ ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಸಂವಿಧಾನದ ಶಿಲ್ಪಿ ಎಂದು ಕರೆಯುತ್ತಾರೆ ಎಂದರು.

ಡಾ ಆನಂದ ಕುಲಕರ್ಣಿ ಮಾತನಾಡಿ ಭಾರತದಲ್ಲಿ ಸಮಾನತೆಯ ಸಿದ್ಧಾಂತವನ್ನು ತರುವುದರ ಮೂಲಕ ಮಾದರಿಯ ಸಮಾಜದ ಕನಸನ್ನು ಕಂಡ ಅಂಬೇಡ್ಕರ್ ಅವರ ಹೆಜ್ಜೆ ಗುರುತುಗಳನ್ನು ವಿಜಯಪುರ ಜಿಲ್ಲೆಯಲ್ಲಇ ಕಾಣುತ್ತೇವೆ. ದಾರ್ಶನಿಕ, ರಾಜಕೀಯ ಚಿಂತಕ, ಆರ್ಥಿಕ ವಿದ್ವಾಂಸ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರನ್ನು ಸರ್ವಧರ್ಮಿಯರು ನಿತ್ಯ ಸ್ಮರಿಸಬೇಕು ಎಂದರು. ಕಸಾಪ ಗೌರವ ಅಧ್ಯಕ್ಷರಾದ ಭಾರತಿ ಪಾಟೀಲ್ ಮಾತನಾಡಿ ಭಾರತಕ್ಕೊಂದು ಸುಭದ್ರ ಸಂವಿಧಾನ ನೀಡಿದ್ದು ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವುದು ಅಂಬೇಡ್ಕರ್ ಅವರ ಕೊಡುಗೆ. ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು ಎಂಬ ಘೋಷಣೆ ಇಂದಿಗೂ ಪ್ರಸ್ತುತ. ಸಮಾಜಕ್ಕೆ ವಿದ್ಯಾವಂತರಾಗಿರಿ, ಸಂಘಟಿತರಾಗಿ ಮತ್ತು ಉತ್ತೇಜಿತರಾಗಿರಿ ಎಂಬ ಸಲಹೆಗಳನ್ನು ನೀಡಿದರು. ಜೀವನ ದೀರ್ಘವಾಗಿರುವುದಕ್ಕಿಂತ ಉತ್ತಮವಾಗಿರಬೇಕು ಎಂಬ ಅನೇಕ ವಿಚಾರಗಳನ್ನು ದೇಶಕ್ಕಾಗಿ ನೀಡಿದರು. ಮಹಿಳಾ ಹಕ್ಕುಗಳನ್ನು ನೀಡಿದ ಮಹಾನ್ ವಿದ್ವಾಂಸ ಎಂದರು.

ಹೋರಾಟಗಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಅಭಿಷೇಕ ಚಕ್ರವರ್ತಿ ಮಾತನಾಡಿ ಡಾ ಬಾಬಾಸಾಹೇಬ ಅಂಬೇಡ್ಕರ್ ದೇಶಕ್ಕೆ ಸಂವಿಧಾನವನ್ನು ನೀಡುವುದರ ಮೂಲಕ ಹನೆಬರಹವನ್ನು ಬದಲಾಯಿಸಿದರು. ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಹಕ್ಕುಗಳನ್ನು ಪಡೆಯುವಲ್ಲಿ ಅನೇಕ ಸಮಾಜಗಳು ಅಸಮರ್ಥವಾಗಿವೆ. ಆದ್ದರಿಂದ ಬದುಕು ಕಟ್ಟಿಕೊಳ್ಳಲು ಮತ್ತು ಶ್ರೇಷ್ಠ ವ್ಯಕ್ತಿಯಾಗಲು ಶಿಕ್ಷಣ ಒಂದೇ ಮಾರ್ಗ ಎಂದರು. ಪದಾಧಿಕಾರಿಗಳಾದ ಎಸ್ ಎಲ್ ಇಂಗಳೇಶ್ವರ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿದರು. ಕಸಾಪ ಪದಾಧಿಕಾರಿಗಳಾದ ಕೆ ಸುನಂದಾ, ಮಲ್ಲಿಕಾರ್ಜುನ ಅವಟಿ, ಸಂಗೀತಾ ಮಠಪತಿ, ರವಿ ಕಿತ್ತೂರ, ಯುವರಾಜ್ ಚೋಳಕೆ, ವಿಜಯಕುಮಾರ್ ಘಾಟಗೆ, ಎಂ ಎ ವಾಲಿಕಾರ, ಪ್ರದೀಪ್ ನಾಯ್ಕೋಡಿ, ಸುರೇಶ್ ಜತ್ತಿ, ನಾಗರಾಜ ಹಸಳ್ಳಿ, ಪರಶುರಾಮ ಚಲವಾದಿ, ಶಿವಾನಂದ ಬಡಾನವರ, ಖಾದರ್ ವಾಲಿಕಾರ ಮುಂತಾದವರು ಉಪಸ್ಥಿತರಿದ್ದರು.