ಡಾ.ಬಾಬಾಸಾಹೇಬ್ ಅಂಬೇಡ್ಕರ್‍ರ ಚಿಂತನೆಗಳು ಸಾರ್ವಕಾಲಿಕ

ಕಲಬುರಗಿ :ಏ.12: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ಸಾಕಷ್ಟು ನೋವುಗಳನ್ನು ಅನುಭವಿಸಿ, ತಮ್ಮ ಕಷ್ಟ, ನೋವುಗಳನ್ನೇ ಗೆಲುವಿನ ಮೆಟ್ಟಿಲನ್ನಾಗಿ, ಅಸಾಧಾರಣ ಪ್ರತಿಭೆ, ಪಾಂಡಿತ್ಯ, ಧೈರ್ಯ ಎಲ್ಲವನ್ನು ಒಟ್ಟಗೂಡಿಸಿ ಸಮಾಜದಲ್ಲಾಗುತ್ತಿರುವ ಶೋಷಣೆ, ಅನ್ಯಾಯ, ಮೋಸ, ಅನಿತಿಗಳ ವಿರುದ್ಧ ಇಡೀ ತಮ್ಮ ಜೀವನ ಪರ್ಯಂತರವಾಗಿ ಹೋರಾಟ ಮಾಡಿ, ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ನ್ಯಾಯವನ್ನು ಒದಗಿಸಿಕೊಟ್ಟ ‘ಭಾರತದ ಭಾಗ್ಯವಿದಾತ’ರಾಗಿದ್ದಾರೆ ಎಂದು ಗುವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಹೇಳಿದರು.
ನಗರದ ಬಿದ್ದಾಪುರ ಕಾಲನಿಯ ಅಕ್ಕಮಹಾದೇವಿ ಆಶ್ರಮದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ‘ಡಾ.ಬಾಬಾ ಸಾಹೇಬ್ ಅಂಬೇಡ್ಕರರ 132ನೇ ಜಯಂತಿ’ಯ ಪ್ರಯುಕ್ತ ‘ಭಾರತದ ಭಾಗ್ಯವಿದಾತ ಡಾ.ಬಾಬಾಸಾಹೇಬ್ ಅಂಬೇಡ್ಕರ್’ ಎಂಬ ವಿಷಯ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಶ್ರಮದ ಪೂಜ್ಯ ಪ್ರಭುಶ್ರೀ ತಾಯಿ ಮಾತನಾಡಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ‘ಶಿಕ್ಷಣ, ಸಂಘಟನೆ ಮತ್ತು ಹೋರಾಟ’ ಎಂಬ ಮೂಲ ಮಂತ್ರದೊಂದಿಗೆ ಸಮಾಜ ಸುಧಾರಣೆಗಾಗಿ ಸಾಕಷ್ಟು ಪ್ರಯತ್ನಿಸಿದ್ದಾರೆ. ಮೂಕ ರೋಧನೆಗೆ ಒಳಗಾಗಿದ್ದ ಶೋಷಿತ ಜನಾಂಗಕ್ಕೆ ಸ್ವಾಭಿಮಾನದ ದೀಕ್ಷೆಯನ್ನು ಕರುಣಿಸಿದ ಮಹಾನ ಚೇತನ ಅವರಾಗಿದ್ದಾರೆ. ಒಬ್ಬ ಜನಸಾಮಾನ್ಯ ವ್ಯಕ್ತಿ ಈ ದೇಶದ ಪ್ರಧಾನಿ, ರಾಷ್ಟ್ರಪತಿಯಾಗಲು ಸಾಧ್ಯವಾಗಿದೆಯೆಂದರೆ, ಅದು ಕೇವಲ ಡಾ.ಬಾಬಾಸಾಹೇಬ್‍ರು ನೀಡಿದ ಸಂವಿಧಾನದಿಂದ ಮಾತ್ರ. ಸಂವಿಧಾನವೇ ಭಾರತದ ರಾಷ್ಟ್ರಗ್ರಂಥವಾಗಿದ್ದು, ಅದರ ಪಾಲನೆ ಪ್ರತಿಯೊಬ್ಬ ಭಾರತೀಯ ಆದ್ಯ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ಪ್ರಗತಿ ಮಾಮಾ, ಪ್ರತೀಕ್ಷಾ ಸೇರಿದಂತೆ ಇನ್ನಿತರರಿದ್ದರು.