ಡಾ. ಪ್ರಸಾದಗೆ ಗುದ್ಲೆಪ್ಪ ಹಳ್ಳಿಕೇರಿ ಪ್ರಶಸ್ತಿ

ಹುಬ್ಬಳ್ಳಿ, ಮೇ30: ಗಾಂಧಿವಾದಿ ಗುದ್ಲೆಪ್ಪ ಹಳ್ಳಿಕೇರಿಯವರ ಜನ್ಮ ಶತಮಾನೋತ್ಸವದ ಸೇವಾ ಗೌರವ ಪ್ರಶಸ್ತಿಗೆ ಪ್ರಸಕ್ತ ವರ್ಷ ಹುಬ್ಬಳ್ಳಿಯ ಸ್ವರ್ಣಾ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಅವರನ್ನು ಆಯ್ಕೆ ಮಾಡಲಾಗಿದೆ. ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷರಾಗಿರುವ ಆಯ್ಕೆ ಸಮಿತಿಯು ಡಾ. ಪ್ರಸಾದ ಅವರನ್ನು ಆಯ್ಕೆ ಮಾಡಿದೆ.
ಹಾವೇರಿ ಜಿಲ್ಲೆ ಹೊಸರಿತ್ತಿಯ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಜೂನ್ 6 ರಂದು ಬೆಳಿಗ್ಗೆ 11 ಗಂಟೆಗೆ ಹೊಸರಿತ್ತಿಯ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವದು. ಮೂಲತಃ ಆಂಧ್ರಪ್ರದೇಶದ ವಿಜಯವಾಡದವರಾದ ಡಾ. ಪ್ರಸಾದ ಅವರ ಕರ್ಮಭೂಮಿ ಹುಬ್ಬಳ್ಳಿ. ಹೆಸರಾಂತ ಉದ್ಯಮಿಯಾಗಿರುವ ಅವರ ಸೇವಾ ಚಟುವಟಿಕೆ, ಬಡ ವಿದ್ಯಾರ್ತಿಗಳು ಹಾಗೂ ದೇವಸ್ಥಾನಗಳಿಗೆ ನೀಡಿರುವ ಆರ್ಥಿಕ ಸಹಾಯ ಇತ್ಯಾದಿ ಸೇವಾ ಕಾರ್ಯಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನ ತಿಳಿಸಿದೆ.