ಡಾ. ಪ್ರಭಾಕರ ಕೋರೆ ಅವರ ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಸಂಸ್ಥೆಗೆ ಹೆಚ್ಚಿದ ಕೀರ್ತಿ : ಮಾಜಿ ಡಿಸಿಎಂ ಲಕ್ಷ್ಮಣ ಸವದಿ

ಅಥಣಿ:ಜ.12: ಗ್ರಾಮೀಣ ಭಾಗದ ಜನತೆ ಈಗಲೂ ಆರೋಗ್ಯದ ಬಗ್ಗೆ ಸಂಪೂರ್ಣ ಜಾಗೃತರಾಗಿಲ್ಲ, ಈ ನಿಟ್ಟಿನಲ್ಲಿ ಕೆ.ಎಲ್.ಇ. ಸಂಸ್ಥೆ ಹಾಗೂ ಅದರ ಅಂಗಸಂಸ್ಥೆಗಳು ವತಿಯಿಂದ ಆಯೋಜಿಸಲಾಗಿರುವ ಈ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.
ಅವರು ಬುಧವಾರ ಡಾ. ಪ್ರಭಾಕರ ಕೋರೆ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವದ ಅಂಗವಾಗಿ, ಕೆ.ಎಲ್.ಇ. ವಿಶ್ವವಿದ್ಯಾಲಯ, ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿ ಮತ್ತು ಅಥಣಿಯ ಕೆ.ಎಲ್.ಇ. ಅಂಗ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಜ್ಯೋತಿ ಪ್ರಜ್ವಲಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಕೆ.ಎಲ್.ಇ. ಸಂಸ್ಥೆಯನ್ನು ಲೋಕಲ್ ನಿಂದ ಗ್ಲೋಬಲ್ ವರೆಗೆ ವಿಶ್ವವೇ ನಿಬ್ಬೆರಗಾಗುವಂತೆ ಬೆಳೆಸಿದ ಕೀರ್ತಿ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ, ಕೋರೆ ಅವರ ಬದ್ದತೆ, ಮತ್ತು ಕಠಿಣ ಪರಿಶ್ರಮವೇ ಸಂಸ್ಥೆಯು ಈ ಹಂತಕ್ಕೆ ತಲುಪಲು ಸಾಧ್ಯವಾಯಿತು, ಡಾ, ಕೋರೆಯವರಿಗೆ ಆ ಭಗವಂತನು ಇನ್ನೂ ನೂರಾರು ಕಾಲ ಆಯುರಾರೋಗ್ಯ ಕೊಟ್ಟು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಡವರ ಸೇವೆ ಮಾಡುವಂತಾಂಗಲಿ ಎಂದು ಶುಭ ಹಾರೈಸಿದರು,
ಸಮಾರoಭದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‍ನ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ ಗ್ರಾಮೀಣ ಪ್ರದೇಶದ ಪ್ರತಿ ಮನೆಬಾಗಿಲಿಗೆ ಆರೋಗ್ಯ ಸೇವೆ ತಲುಪಿಸುವುದು ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಕನಸಾಗಿದ್ದು ಆ ನಿಟ್ಟಿನಲ್ಲಿ ಸಂಸ್ಥೆಯು ವಿವಿಧ ಸ್ಥಳಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ ಎಂದ ಅವರು ಮುಂಬರುವ ಶೈಕ್ಷಣಿಕ ವರ್ಷದಿಂದ ಅಥಣಿಯಲ್ಲಿ ಸ್ವತಂತ್ರ ಪದವಿ-ಪೂರ್ವ ಮಹಾವಿದ್ಯಾಲಯವನ್ನು ಕೆ.ಎಲ್.ಇ. ಸಂಸ್ಥೆ ಆರಂಭಿಸುತ್ತಿದ್ದು ಅದರಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ವಸತಿ ನಿಲಯ, ಸಿ.ಇ.ಟಿ, ಜೆಇಇ, ನೀಟ್ ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಗುಣಾತ್ಮಕ ತರಬೇತಿಯನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ನೀಡಲಾಗುವುದೆಂದರು.
ಶೇಗುಣಶಿ ವಿರಕ್ತ ಮಠದ ಡಾ. ಮಹಾಂತ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಅತಿಥಿಗಳಾಗಿದ್ದ ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕ ಬಸವರಾಜ ಪಾಟೀಲ, ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ. ಮಲ್ಲಿಕಾರ್ಜುನ ಹಂಜಿ, ಅಲ್ಲಪ್ಪಣ್ಣಾ ನಿಡೋಣಿ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಎಸ್.ಕಾಂಬಳೆ, ಪಿಯು ಕಾಲೇಜಿನ ಪ್ರಾಚಾರ್ಯ, ಡಾ. ಆರ್ ಎನ್ ಇನಾಮದಾರ. ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರುಗಳಾದ ಪ್ರಕಾಶ ಪಾಟೀಲ, ಎಸ್.ಜಿ. ಮಮದಾಪೂರ, ಅನೀಲ ಮೆಣಶಿ, ವಿಜಯಕುಮಾರ ಬುರ್ಲಿ, ಅಶೋಕ ಬುರ್ಲಿ, ಶ್ರೀಶೈಲ ಸಂಕ, ಕೆ.ಎಲ್.ಇ, ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ. ನವೀನ ಮೂಲಿಮನಿ, ಡಾ. ಎಸ್.ಬಿ.ಪಾಟೀಲ, ಡಾ. ರಾಹುಲ ಜಾನಗೌಡರ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ. ಬಿ.ಎಸ್.ಕಾಂಬಳೆ ಸ್ವಾಗತಿಸಿದರು, ಡಾ. ಭಾರತಿ ಗಡ್ಡಿ ಅತಿಥಿಗಳನ್ನು ಪರಿಚಯಿಸಿದರು, ಮಾರುತಿ. ಬಿ. ಕಾರ್ಯಕ್ರಮ ನಿರೂಪಿಸಿದರು, ಉಪ-ಪ್ರಾಚಾರ್ಯ ಡಾ. ಪ್ರಶಾಂತ ಮಗದುಮ್ಮ ವಂದಿಸಿದರು.