ಡಾ. ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ

ಬ್ಯಾಡಗಿ, ಅ 29- ಗಾನಯೋಗಿ ಡಾ.ಪುಟ್ಟರಾಜ ಗವಾಯಿಗಳು ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು. ಜೊತೆಗೆ ಅವರು ಲಕ್ಷಾಂತರ ಮಂದಿಗೆ ಸಂಗೀತ ವಿದ್ಯೆಯನ್ನು ಧಾರೆ ಎರೆದಿದ್ದಾರೆ ಎಂದು ಪುರಸಭಾ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಸ್ಮರಿಸಿದರು.
ಪಟ್ಟಣದ ಶ್ರೀ ಗಾನಯೋಗಿ ಕಲಾತಂಡದ ನೂತನ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪುಟ್ಟರಾಜ ಗವಾಯಿಗಳ 10ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತ, ಡಾ.ಪುಟ್ಟರಾಜ ಗವಾಯಿಗಳ ಸಾಧನೆ ಅಸಾಮಾನ್ಯವಾದುದು. ಅಂಧರಾಗಿದ್ದರೂ ಸಹ ಸಂಗೀತ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಬೆಳೆದ ಗವಾಯಿಗಳು ಅಪಾರ ಶಿಷ್ಯವರ್ಗಕ್ಕೂ ಸಂಗೀತವನ್ನು ಧಾರೆ ಎರೆಯುವ ಮೂಲಕ ಸಂಗೀತದ ಅಲೆಯನ್ನು ಬೆಳೆಸುವಲ್ಲಿ ಕಾರಣಿಕರ್ತರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಲಾತಂಡದ ಅಧ್ಯಕ್ಷ ವೀರಭದ್ರಗೌಡ ಹೊಮ್ಮರಡಿ ಮಾತನಾಡಿ, ಪ್ರತಿಯೊಬ್ಬರಿಗೂ “ಅಜ್ಜ” ಎಂದೇ ಖ್ಯಾತರಾದ ಪುಟ್ಟರಾಜ ಗವಾಯಿಗಳು ಸಂಗೀತ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುವ ಮೂಲಕ ಸಮಾಜದಲ್ಲಿ ಗಳಿಸಿರುವ ಪ್ರೀತಿ, ವಿಶ್ವಾಸದ ಸಂಕೇತವಾಗಿದೆ. ಅವರ ಆಶೀರ್ವಾದದೊಂದಿಗೆ ನಮ್ಮ ಕಲಾತಂಡ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಲಾತಂಡದ ನೂತನ ಕಾರ್ಯಾಲಯವನ್ನು ಪುರಸಭಾ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಉದ್ಘಾಟಿಸಿ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಕಲಾವಿದರಾದ ದೇವರಾಜ ಹುಡೇದ, ಮಾಲತೇಶ ದೇವಗಿರಿ, ನಾಗರಾಜ ದ್ಯಾಮಣ್ಣನವರ, ಮಂಜುನಾಥ ಮುಂಡರಗಿ, ಶ್ರೀಕಾಂತ ಉಜನಿ, ಸುಧೀರ ಹವಳದ, ಮುತ್ತಣ್ಣ ಕುಬಸದ, ಮೈನುದ್ಧಿನ್ ಕಾಟೇನಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.