ಡಾ.ಪಿ.ಜಿ. ಹಳಕಟ್ಟಿ ಪ್ರತಿಷ್ಠಾನದಿಂದ ವಾರ್ಷಿಕ ರಾಷ್ಟ್ರೀಯ ಪ್ರಶಸ್ತಿ ಘೋಷಣೆ 

ದಾವಣಗೆರೆ.ಏ.೧೮ : ಜುಲೈ 2 ರಂದು ಡಾ. ಪಿ.ಜಿ. ಹಳಕಟ್ಟಿಯವರ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ ಡಾ.ಪಿ.ಜಿ. ಹಳಕಟ್ಟಿ ಪ್ರತಿಷ್ಠಾನವು ವಚನ ಪಿತಾಮಹಾ ಡಾ.ಪಿ.ಜಿ. ಹಳಕಟ್ಟಿ ಅವರ ಸ್ಮರಣಾರ್ಥವಾಗಿ ಸಾಹಿತ್ಯ, ಶೈಕ್ಷಣಿಕ ಮತ್ತು ಲೋಕೋಪಕಾರ ಕ್ಷೇತ್ರದಲ್ಲಿನ ವಿಶಿಷ್ಟ ಕೊಡುಗೆದಾರರಿಗೆ ಹೊಸ ವಾರ್ಷಿಕ ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಮಾಡಿದೆ. 

ರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸುವ ನಿರ್ಧಾರವನ್ನು ಟ್ರಸ್ಟಿಗಳಾದ ಡಾ.ಪಿ.ಜಿ. ಹಳಕಟ್ಟಿ ಮತ್ತು ಶ್ರೀಮತಿ ಪವಿತ್ರಾ ಹಳಕಟ್ಟಿಯವರ ಮರಿಸೊಸೆಯೂ ಹಾಗೂ ಡಾ.ಪಿ.ಜಿ. ಹಳಕಟ್ಟಿಯವರ ಮರಿಮೊಮ್ಮಗಳೂ ವಾಣಿಜ್ಯೋದ್ಯಮಿ ಶ್ರೀಮತಿ ಶೀಲಾ ಹರ ಹಳಕಟ್ಟಿ ಅವರು ರೂಪಿಸಿದ್ದಾರೆ. ಹಿರಿಯ ರಾಜಕಾರಣಿ ಎಂ. ರಾಜಶೇಖರ ಮೂರ್ತಿ ಅವರ ತಾಯಿಯ ಮೊಮ್ಮಗಳೂ ಆಗಿದ್ದಾರೆ.

ಈ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು, ಗೌರವಾನ್ವಿತ ನ್ಯಾಯಮೂರ್ತಿಗಳಾದ ಶಿವರಾಜ್ ಪಾಟೀಲ್ ಮತ್ತು ನಾಡೋಜ ಡಾ. ಮನು ಬಳಿಗರ್ ಇವರುಗಳ ಸಾನ್ನಿಧ್ಯದಲ್ಲಿ ಘೋಷಣೆ ಮಾಡಲಾಯಿತು. ರಾಷ್ಟ್ರೀಯ ಪ್ರಶಸ್ತಿಗಳು ಒಂದು ಟ್ರೋಫಿ, ಪ್ರಶಸ್ತಿಪತ್ರ ಹಾಗೂ ರೂ. 1 ಲಕ್ಷ ನಗದು ಬಹುಮಾನ ಒಳಗೊಂಡಿದೆ. ಪ್ರಶಸ್ತಿ ಪುರಸ್ಕೃತರನ್ನು ನಾಡೋಜ ಡಾ.ಮನು ಬಳಿಗಾರ್ ರವರು ಹಾಗೂ ಡಾ.ಪಿ.ಜಿ. ಹಳಕಟ್ಟಿ ಪ್ರತಿಷ್ಠಾನದ ಸದಸ್ಯರಿಂದ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. 

1880ರಲ್ಲಿ ಜನಿಸಿದ, ವಚನ ಪಿತಾಮಹಾ ಡಾ. ಪಿ.ಜಿ. ಹಳಕಟ್ಟಿ ಅವರು ಒಬ್ಬ ವಕೀಲರೂ, ರಾಜಕಾರಣಿಗಳೂ ಮತ್ತು ಶಿವಶರಣರ ಆದರ್ಶಗಳನ್ನು ಪ್ರಸಾರ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಪ್ರತಿಮ ಸಾಹಿತಿ ಮತ್ತು ಸಮಾಜ ಸುಧಾರಕರೂ ಆಗಿದ್ದರು. ಇವರು ಶೈಕ್ಷಣಿಕ ಉದ್ದೇಶದಿಂದ ತೊಡಗಿಸಿಕೊಳ್ಳುವ ಸಂಸ್ಥೆಗಳಾದ ‘ವೀರಶೈವ ಶಿಕ್ಷಣ ನಿಧಿ’, ‘ವೀರಶೈವ ವಿದ್ಯಾವರ್ಧಕ ಸಂಘ’, ‘ಸಿದ್ದೇಶ್ವರ ಮಧ್ಯಮ ಶಾಲೆ’ ಹಾಗೂ ಅನೇಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಮೊಟ್ಟಮೊದಲ ಸಹಕಾರಿ ಬ್ಯಾಂಕ್ ಆದ ‘ಸಿದ್ದೇಶ್ವರ ಬ್ಯಾಂಕ್’ ಅನ್ನು ಸ್ಥಾಪಿಸಿದರು. ವಚನ ಸಾಹಿತ್ಯದ ಉದ್ದೇಶಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟರು ಮತ್ತು ಅಕ್ಟೋಬರ್ 23, 1910 ರಂದು ಬಿಎಲ್ ಡಿಇಎ (ಬಿಜಾಪುರ ಲಿಂಗಾಯತ ಎಜುಕೇಷನ್ ಅಸೋಸಿಯೇಷನ್) ಸ್ಥಾಪಿಸಿದರು.

ಬಿಎಲ್ ಡಿಇಎ ಉತ್ತರ ಕರ್ನಾಟಕ ಪ್ರದೇಶಗಳಲ್ಲಿ 100 ವರ್ಷಗಳಿಗಿಂತ ಹೆಚ್ಚಿನ ಪರಂಪರೆಯುಳ್ಳ ಪ್ರಮುಖ ಶಿಕ್ಷಣ ಸಂಸ್ಥೆಯಾಗಿದೆ ಮತ್ತು ಈಗ ಅದರ ಹೆಸರಿನ ಅಡಿಯಲ್ಲಿ 75 ಶಿಕ್ಷಣ ಸಂಸ್ಥೆಗಳಿವೆ. 35 ವರ್ಷಗಳ ಕಾಲ ನಿರಂತರವಾಗಿ ‘ಶಿವೌಭವ’ ಪತ್ರಿಕೆಯನ್ನು ಪ್ರಕಟಿಸಿದರು. ಬೊಂಬಾಯಿ ರಾಜ್ಯದಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.