ಡಾ. ಜಗಜೀವನರಾಂ ಜಯಂತಿ ಅದ್ಧೂರಿ ಆಚರಣೆ ನಾಳೆ

ಕಲಬುರಗಿ,ಏ 4: ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಅವರ 116ನೆಯ ಜಯಂತ್ಯೋತ್ಸವವನ್ನು ನಾಳೆ ( ಏ 5) ನಗರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು. ಪ್ರಯುಕ್ತ ನಗರದ 24 ಬಡಾವಣೆಗಳಿಂದ ವಿಜೃಂಭಣೆಯ ಮೆರವಣಿಗೆ ಜರುಗಲಿದೆ ಎಂದು ಜಿಲ್ಲಾ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಪ್ರಕಾಶ ಮಾಳಗೆ ಹಾಗೂ ಮುಖಂಡರಾದ ಪರಮೇಶ್ವರ ಖಾನಾಪುರ ಮತ್ತು ರಾಜು ವಾಡೇಕರ್ ಅವರು ಜಂಟಿಯಾಗಿ ತಿಳಿಸಿದರು.
ನಗರದ ರೈಲ್ವೆ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಳೆ ಬೆಳಿಗ್ಗೆ 8ಗಂಟೆಗೆ ಜಿಲ್ಲಾಧಿಕಾರಿಗಳು ಡಾ. ಬಾಬು ಜಗಜೀವನರಾಂ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವರು. ನಂತರ ಜಿಲ್ಲಾ ಜಯಂತ್ಯೋತ್ಸವ ಸಮಿತಿಯಿಂದ ವಿವಿಧ ಗಣ್ಯರು ಮಾಲಾರ್ಪಣೆ ಮಾಡುವರು ಎಂದು ತಿಳಿಸಿದ ಅವರು, ಅಂದು ಸಾಯಂಕಾಲ 4ಗಂಟೆಗೆ ನಗರದ 24 ಬಡಾವಣೆಗಳಿಂದ ಸಮಾಜದವರು ಮೆರವಣಿಗೆ ಮೂಲಕ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸೇರಿಕೊಂಡು ನಂತರ ಮೂರ್ತಿ ಆವರಣಕ್ಕೆ ಭವ್ಯಮೆರವಣಿಗೆ ಹೊರಡಲಿದೆ ಎಂದು ತಿಳಿಸಿದರು.
ಸಂಜೆ 6ಗಂಟೆಗೆ ನಡೆಯುವ ಬಹಿರಂಗ ಸಭೆಯಲ್ಲಿ ಧಾರವಾಡದ ನಿವೃತ್ತ ಉಪನ್ಯಾಸಕ ಜಿ.ಬಿ. ನಂದನ ಅವರು ಡಾ. ಬಾಬು ಜಗಜೀವನರಾಂ ಅವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಮೆರವಣಿಗೆ ಗಳಲ್ಲಿ ವಿವಿಧ ಕಲಾತಂಡದವರು ಪಾಲೊಳ್ಳಲಿದ್ದಾರೆ. ಜಯಂತ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಕ್ರಿಕೆಟ್ ಕ್ರೀಡಾಕೂಟಗಳಲ್ಲಿ ವಿಜೇತರಾದ ಬೋರಾಬಾಯಿ ನಗರ ತಂಡ ಹಾಗೂ ರನ್ನರ್ ಆಪ್ ಆಗಿರುವ ತಾರಫೈಲ್ ಬಡಾವಣೆಯ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಗುವುದೆಂದು ತಿಳಿಸಿದ ಅವರು, ನಿವೃತ್ತ ಕೆಎಎಸ್ ಅಧಿಕಾರಿ ಎಸ್.ಎಸ್. ದಿವಾಕರ್ ಅವರಿಗೆ ಸಮಿತಿಯಿಂದ ವಿಶೇಷ ಸನ್ಮಾನ ಸಹ ಏರ್ಪಡಿಸಲಾಗಿದೆ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಸನ್ಮಾನಿಸಲಾಗುವದು.ನಾಳೆ ನಡೆಯಲಿರುವ ಬಾಬುಜಿ ಜಯಂತ್ಯೋತ್ಸವ ಸಮಾರಂಭವು ಶಾಂತ ಮತ್ತು ವಿಜೃಂಭಣೆಯಿಂದ ಆಚರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಪಾಲೊಳ್ಳಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ದೊಡ್ಡಮನಿ, ಪ್ರಚಾರ ಸಮಿತಿ ಕಾರ್ಯಾಧ್ಯಕ್ಷ ರಂಜೀತ ಮೂಲಿಮನಿ, ಸಮಿತಿಯ ಕಾರ್ಯಾಧ್ಯಕ್ಷ ಸುಶೀಲ ಕಾಂಬಳೆ, ಮಹೇಶ ವಾಡೇಕರ್, ಗೋಪಾಲ ನಾಟೇಕಾರ, ರವಿಚಂದ್ರ ಕ್ರಾಂತಿಕರ್, ಲಿಂಗರಾಜ ತಾರಫೈಲ್, ದತ್ತು ಭಾಸಗಿ ಸೇರಿದಂತೆ ಮತ್ತಿತರರು ಇದ್ದರು.