ಡಾ.ಗುರುಪಾದಪ್ಪಾ ನಾಗಮಾರಪಳ್ಳಿ ಸೌಹಾರ್ದ ತರಬೇತಿ ಸಂಸ್ಥೆಯಲ್ಲಿ ಬ್ಯಾಂಕಿಂಗ್ ಪರೀಕ್ಷಾ ತರಬೇತಿ

ಬೀದರ :ಸೆ.14:ಡಿಸಿಸಿ ಬ್ಯಾಂಕಿನ ಡಾ|| ಗುರುಪಾದಪ್ಪಾ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಸೆಪ್ಟೆಂಬರ ಕೊನೆ ವಾರದಲ್ಲಿ ನಡೆಯಲಿರುವ ಬ್ಯಾಂಕಿಂಗ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 5 ದಿನಗಳ ಬ್ಯಾಂಕಿಂಗ ಪರೀಕ್ಷಾ ತರಬೇತಿಯನ್ನು ಪ್ರಥಮ ಬಾರಿಗೆ ಏರ್ಪಡಿಸಲಾಗಿದ್ದು ತರಬೇತಿ ಉದ್ಘಾಟನೆ ನಡೆಸಲಾಯಿತು.

ತರಬೇತಿ ಉದ್ಘಾಟಿಸಿದ ನಬಾರ್ಡನ ಜಿಲ್ಲಾ ಅಭಿವೃದ್ದಿ ಅಧಿಕಾರಿ ರಾಮಾರಾವ ಯೆಗಬೋಟೆಯವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವೈಫಲ್ಯಗಳು ಸ್ವಾಭಾವಿಕವಾಗಿದ್ದು ಒಂದೆರಡು ಪ್ರಯತ್ನಗಳ ಅಪಯಶಸ್ಸಿನಿಂದ ಯಾರೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ತಾಳ್ಮೆಯ ತಯ್ಯಾರಿ, ನಿರಂತರ ಪ್ರಯತ್ನ, ತಾರ್ಕಿಕ ಯೋಚನೆ ಮತ್ತು ಆಳವಾದ ಅಧ್ಯಯನಗಳಿಂದ ಎಲ್ಲರೂ ಯಶಸ್ಸುಗಳಿಸಬಹುದು. ಪರೀಕ್ಷೆಯ ತಯಾರಿ ಒಂದು ತಪಸ್ಸು ಆಗಬೇಕು. ಇಲ್ಲಿ ಅನುತ್ತೀರ್ಣ ಎನ್ನುವುದು ಇರುವುದಿಲ್ಲಾ, ಕೇವಲ ಆ ಹುದ್ದೆಗೆ ಬೇಕಾದ ಅರ್ಹತೆಯನ್ನು ತಾನು ಸಂಪಾದಿಸಿಲ್ಲಾ ಎಂಬ ಅರ್ಥ ಮಾತ್ರ ಇರುತ್ತದೆ. ಆದುದರಿಂದ ತನ್ನ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳದೆ ಮುಂದಡಿಯಿಡಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶಗಳು ಎಲ್ಲರಿಗೂ ಸಮಾನವಾಗಿ ಒದಗಿಬರುತ್ತಿದ್ದು ಪ್ರತಿಯೊಬ್ಬರು ಅದನ್ನು ಪಡೆಯುವ ಸಾಮಥ್ರ್ಯವನ್ನು ಗಳಿಸಿಕೊಳ್ಳಬೇಕು. ಅದಕ್ಕೆ ತರಬೇತಿಗಳು ಆವಶ್ಯಕವಾಗಿವೆ ಎಂದು ನುಡಿದರು.

ಬೀದರ ಜಿಲ್ಲೆಯಲ್ಲೂ ಡಿಸಿಸಿ ಬ್ಯಾಂಕಿನ ಸಹಾರ್ದ ತರಬೇತಿ ಸಂಸ್ಥೆಯ ಮೂಲಕ ಬ್ಯಾಂಕಿಂಗ ತರಬೇತಿಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ. ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಯಶಸ್ಸು ಸಾಧಿಸಬೇಕು. ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿಯೇ ಶಿಕ್ಷಣ ಪೂರೈಸಿರುವ ಹಲವರು ನಂತರ ಇಂಗ್ಲೀಷ್ ಭಾಷಾ ಫ್ರೌಢಿಮೆಯನ್ನು ಪಡೆದು ಯಶಸ್ವಿ ವ್ಯಕ್ತಿಗಳಾಗಿದ್ದಾರೆ. ಪ್ರಸಿದ್ದರಾಗಿದ್ದಾರೆ. ಇಸ್ರೋದಂತಹ ಸಂಸ್ಥೆಗಳಲ್ಲೂ ಯಶಸ್ವಿ ವಿಜ್ಞಾನಿಗಳಾಗಿದ್ದಾರೆ. ಗ್ರಾಮೀಣ ಭಾಗದವರೆಂದು ಕೀಳರಿಮೆ ಬೆಳೆಸಿಕೊಳ್ಳದೇ ಪ್ರಾಥಮಿಕ ಜ್ಞಾನ ಪಡೆದುಕೊಂಡಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಹುದು ಎಂದು ನಬಾರ್ಡನ ಜಿಲ್ಲಾ ಅಭಿವೃದ್ದಿ ಅಧಿಕಾರಿ ರಾಮಾರಾವ ಯೆಗಬೋಟೆಯವರು ನುಡಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಪ್ರಖ್ಯಾತ ಬ್ಯಾಂಕಿಂಗ್ ಪರೀಕ್ಷೆಗಳ ತರಬೇತುದಾರ, ದಿನಪತ್ರಿಕೆಗಳ ಅಂಕಣಕಾರ ಶ್ರೀ ಆರ್.ಕೆ. ಬಾಲಚಂದ್ರ ಅವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ತಿಳಿಸಿದರು. ಇನ್ನೋರ್ವ ತರಬೇತುದಾರ ಭಾರತಿಯ ಸ್ಟೇಟ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಶ್ರೀ ಪ್ರಕಾಶ ಆರ್ ಎಸ್ ಅವರು ತರಬೇತಿ ಉದ್ದೇಶಗಳನ್ನು ತಿಳಿಸಿದರು.

ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು, ಸ್ವಾಗತಿಸಿದರೆ, ಎಸ ಜಿ ಪಾಟೀಲ ವಂದಿಸಿದರು ಮಂಜುನಾಥ ಭಾಗವತ ಕಾರ್ಯಕ್ರಮ ನಿರ್ವಹಿಸಿದರು. ಅನಿಲ ಪಿ, ಮಹಾಲಿಂಗ ಸಹಕರಿಸಿದರು.