ಡಾ.ಕೆ.ಸುಧಾಕರ್ ಗೆಲುವಿಗೆ ನಾವೆಲ್ಲರೂ ಬದ್ಧ

ಗೌರಿಬಿದನೂರು.ಏ.೨೦- ಚಿಕ್ಕಬಳ್ಳಾ ಪುರ ಲೋಕಸಭೆ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ಪರವಾಗಿ ಕೆಲಸ ಮಾಡಲು ಬಿಜೆಪಿ, ಜೆಡಿಎಸ್ ಮತ್ತು ಕೆಂಪರಾಜು ಬಣದ ಕಾರ್ಯಕರ್ತರು ಬದ್ಧರಾಗಿದ್ದಾರೆ. ಕಾರ್ಯಕರ್ತರಲ್ಲಿ ಯಾವುದೇ ಗೊಂದಲಗಳಿಲ್ಲ, ನಮ್ಮ ಅಭ್ಯರ್ಥಿ ಗೆಲುವು ಶೇ.೧೦೦ ರಷ್ಟು ಶತಸಿದ್ಧ ಎಂದು ತಾಲ್ಲೂಕು ಉಸ್ತುವಾರಿ ಸೀತಕಲ್ ರಾಮಚಂದ್ರಪ್ಪ ತಿಳಿಸಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಮಧ್ಯಾಹ್ನ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ದೇಶದ ಪ್ರಧಾನಿಯನ್ನಾಗಿ ಮಾಡಲು ನಾವೆಲ್ಲರೂ ಸ್ಥಳೀಯ ಎನ್‌ಡಿಎ ಅಭ್ಯರ್ಥಿಯ ಕೈ ಬಲಪಡಿಸಲು ಶ್ರಮಿಸಬೇಕಾಗಿದೆ. ನಮ್ಮ ಕಾರ್ಯಕರ್ತರಲ್ಲಿ ಯಾವುದೇ ಗೊಂದಲಗಳಿಲ್ಲ, ಎಲ್ಲರೂ ಒಮ್ಮತದಿಂದ ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ಮಾಡುತ್ತಿದ್ದು ಹೆಚ್ಚಿನ ಬಹುಮತದಿಂದ ಅಭ್ಯರ್ಥಿಯ ಗೆಲುವಿಗೆ ಕಾರಣರಾಗುತ್ತೇವೆ ಎಂದು ಹೇಳಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಸಿ.ಮಂಜುನಾಥರೆಡ್ಡಿ ಮಾತನಾಡಿ, ಪಕ್ಷದ ಹೈಕಮಾಂಡ್ ತೀರ್ಮಾನದಂತೆ ನಾವೆಲ್ಲರೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎನ್ ಡಿ ಎ ಅಭ್ಯರ್ಥಿ ಡಾ.ಕೆ.ಸುಧಾಕರ್ ರವರ ಪರವಾಗಿ ಮತಯಾಚನೆ ಮಾಡುತ್ತಿದ್ದೇವೆ. ಕಾರ್ಯಕರ್ತರು ಮುಂದಿನ ೪-೫ ದಿನಗಳ ಕಾಲ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿ ಅಭ್ಯರ್ಥಿಯ ಗೆಲುವಿಗೆ ಪಣ ತೊಡಬೇಕಾಗಿದೆ ಎಂದು ಹೇಳಿದರು.
ಮುಖಂಡರಾದ ಕೆ.ಕೆಂಪರಾಜು ಮಾತನಾಡಿ, ಏ.೨೦ರಂದು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ಮಾನ್ಯ ನರೇಂದ್ರ ಮೋದಿರವರು ಆಗಮಿಸಲಿದ್ದು, ೨೧ ರಂದು ಬಾಗೇಪಲ್ಲಿಗೆ ತೆಲುಗು ಸಿನಿಮಾ ನಟ ಪವನ್ ಕಲ್ಯಾಣ್ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರವಾಗಿ ಮತಯಾಚನೆ ಮಾಡಲು ಬರುತ್ತಿದ್ದಾರೆ. ತಾಲ್ಲೂಕಿನ ಪ್ರತೀ ಬೂತ್ ಮಟ್ಟದಿಂದ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ಹೇಳಿದರು.
ಈ ವೇಳೆ ಮುಖಂಡರಾದ ಎನ್.ಎಂ.ರವಿನಾರಾಯಣರೆಡ್ಡಿ, ಸಿ.ಆರ್.ನರಸಿಂಹ ಮೂರ್ತಿ, ಸಿ.ಮಂಜುನಾಥ ರೆಡ್ಡಿ, ಬಿ.ಜಿ. ವೇಣುಗೋಪಾಲ ರೆಡ್ಡಿ, ಚಿನ್ನಪ್ಪರೆಡ್ಡಿ, ರಮೇಶ್ ರಾವ್ ಶೇಲ್ಕೆ, ಹರೀಶ್, ಬಿ.ಎನ್.ರಾಘವೇಂದ್ರ, ಶ್ರೀನಿವಾಸರೆಡ್ಡಿ, ವೆಂಕಟರವಣಪ್ಪ, ಕೋಟೆಭಾಸ್ಕರ್, ಪ್ರಭಾಕರ್, ಬೈಪಾಸ್ ನಾಗರಾಜ್, ಬೇಗ್, ಕೆಂಕರೆ ಶ್ರೀನಿವಾಸ್, ಮುದ್ದುವೀರಪ್ಪ ಉಪಸ್ಥಿತರಿದ್ದರು.