ಡಾ. ಕೃಷ್ಣಮೂರ್ತಿ ಸಾವು ಪ್ರಕರಣ: ತನಿಖೆಗೆ ಆಗ್ರಹ

ಮಂಗಳೂರು, ನ.೧9- ಕಾಸರಗೋಡು ಜಿಲ್ಲೆಯ ಕುಂಬಳೆಯ ಬದಿಯಡ್ಕದ ದಂತ ವೈದ್ಯ ಡಾ. ಕೃಷ್ಣಮೂರ್ತಿಯ ಅನುಮಾನಾಸ್ಪದ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ನಗರದ ಸರ್ಕ್ಯೂಟ್ ಹೌಸ್ ಮುಂದೆ ಶುಕ್ರವಾರ ಹಣತೆ ಬೆಳಗಿ ಪ್ರತಿಭಟನೆ ನಡೆಸಲಾಯಿತು. 

ಮುಂಗಳೂರು ಹವ್ಯಕ ಸಭಾ (ರಿ), ದ.ಕ., ಕಾಸರಗೋಡು ಹವ್ಯಕ ಮಹಾಸಭಾ ಮತ್ತು ಮಂಗಳೂರು ಹವ್ಯಕ ಮಂಡಲದ ಜಂಟಿ ಆಶ್ರಯದಲ್ಲಿ ನಡೆದ ಪ್ರತಿಭಟನೆ ಹವ್ಯಕ ಸಭಾದ 250ಕ್ಕೂ ಅಧಿಕ ಸದಸ್ಯರು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಡಾ.ಕೃಷ್ಣಮೂರ್ತಿಯ ಸಾವಿನ ರಹಸ್ಯದ ಹಿಂದೆ ಇರುವ ಹುನ್ನಾರವನ್ನು ಬಯಲಿಗೆ ತರಬೇಕು, ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ಹವ್ಯಕ ಸಭಾ ಮಂಗಳೂರು ಇದರ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್, ಹವ್ಯಕ ಮಂಡಲ ಅಧ್ಯಕ್ಷ ಗಣೇಶ ಮೋಹನ್ ಕಾಶಿಮಠ, ದ.ಕ. ಹಾಗೂ ಕಾಸರಗೋಡು ಹವ್ಯಕ ಮಹಾಸಭಾ ಅಧ್ಯಕ್ಷ ನಿಡುಗಳ ಕೃಷ್ಣ ಭಟ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.