ಡಾ. ಐಹೊಳ್ಳಿ, ಡಾ. ಮದಭಾವಿಯವರಿಗೆ ಗೌರವಾಭಿನಂದನೆ

ವಿಜಯಪುರ:ಮಾ.22: ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಚಿತ ಸರ್ವಾಧ್ಯಕ್ಷರಾದ ಡಾ. ವಿ.ಡಿ.ಐಹೊಳ್ಳಿಯವರು, ಇತ್ತೀಚಿಗೆ ಕರ್ನಾಟಕ ಸರಕಾರ ನೇಮಕ ಮಾಡಿದ ‘ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ’ ಸದಸ್ಯರಾದ ಡಾ. ಎಂ.ಎಸ್.ಮದಭಾವಿಯವರು ಕನ್ನಡ ನಾಡು – ನುಡಿಗೆ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಸೂಕ್ತ ಗೌರವಸ್ಥಾನ ಸಿಕ್ಕಿರುವುದು ನಮಗೆಲ್ಲ ಅಭಿಮಾನ ಅರಳುವಂತೆ ಮಾಡಿದೆ ಎಂದು ನಗರದ ಟಾಯರ ಉದ್ಯೋಗದ ಮಾಲೀಕರು, ವಿವಿಧ ಉದ್ದಿಮೆದಾರರಾದ ಶರಣಬಸಪ್ಪ ಅರಕೇರಿಯವರು ಇಂದಿಲ್ಲಿ ಅಭಿಪ್ರಾಯಪಟ್ಟರು.
ಅವರು ಬಿ.ಎಲ್.ಡಿ.ಇ. ಸಂಸ್ಥೆಯ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡ ಡಾ. ಐಹೊಳ್ಳಿ ಡಾ. ಮದಭಾವಿಯವರ ಗೌರವಾಭಿನಂದನ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದರು.
ಅತಿಥಿಗಳಾಗಿ ಪಾಲ್ಗೊಂಡ ವಿಜಯಪುರ ಮಹಾನಗರ ಪಾಲಿಕೆಯ ಸದಸ್ಯರಾದ ಅಶೋಕ ನ್ಯಾಮಗೊಂಡ ಅವರು ಇರ್ವರು ಸಾಧಕರು ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿ ನಮಗೆಲ್ಲ ಮಾರ್ಗದರ್ಶಕರಾಗಿದ್ದಾರೆಂದು ಹೇಳಿದರು.
ಗೌರವ ಅತಿಥಿಗಳಾಗಿ ಪಾಲ್ಗೊಂಡ ಸಾಹಿತಿಗಳಾದ ಡಾ. ಮಲ್ಲಿಕಾರ್ಜುನ ಮೇತ್ರಿಯವರು ಮಾತನಾಡಿ “ಬರುವದೆನುಂಟುಮ್ಮೆ – ಬರುವ ಕಾಲಕೆಬಹುದು” ಎಂಬ ಮಧುರಚೆನ್ನರ ಮಾತನ್ನು ಸ್ಮರಿಸಿ ಸಂಶೋಧನೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಡಾ. ಐಹೊಳ್ಳಿ, ಡಾ. ಮದಭಾವಿಯವರು ಜನಾಂಗ ನೆನಪಿಡುವ ಕಾರ್ಯಗಳನ್ನು ಮಾಡುತ್ತಿದ್ದರೆ ಹಲವಾರು ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ತಿಳಿಸಿದರು.
ಖೇಡ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರು ಪ್ರೊ. ಎಂ.ಡಿ.ಹೆಬ್ಬಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಇಬ್ಬರು ಸಾಧಕರ ಕೊಡುಗೆಗಳನ್ನು ಪ್ರಶಂಸಿದರು. ಪ್ರೊ. ಎಸ್.ಜಿ.ಹೆಬ್ಬಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.