ಡಾ. ಎಸ್.ಎನ್.ಬಿರಾದಾರ ಅವರಿಗೆ ಶಿಕ್ಷಣರತ್ನ ಪ್ರಶಸ್ತಿ

ಭಾಲ್ಕಿ :ನ. 08: ಹಿರೇಮಠ ಸಂಸ್ಥಾನದಲ್ಲಿ ಶಿಕ್ಷಣ ರಂಗದಲ್ಲಿ ಸೇವೆ ಸಲ್ಲಿಸಿದ ಡಾ. ಎಸ್.ಎನ್.ಬಿರಾದಾರ ಅವರಿಗೆ ಶಿಕ್ಷಣರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸನ್ನಿಧಾನವಹಿಸಿ, ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಶಿಕ್ಷಣವೇ ಬುನಾದಿ ಎಂದು ನಂಬಿ ತಮ್ಮ ಸಂಪೂರ್ಣ ಜೀವನವನ್ನು ಶಿಕ್ಷಣಕ್ಷೇತ್ರದಲ್ಲಿ ತೊಡಗಿಸಿಕೊಂಡು ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶೈಕ್ಷಣಿಕ ರಂಗದಲ್ಲಿ ಇವರು ಸಲ್ಲಿಸಿರುವ ಸೇವೆ ಅಮೋಘವಾಗಿದೆ.

ಸರಳ ಸಜ್ಜನಿಕೆಗೆ ಹೆಸರಾಗಿರುವ ಇವರು ಬಸವಾದಿ ಶರಣರ ತತ್ವಾದರ್ಶಗಳನ್ನು ನಿಜಾಚರಣೆಯಲ್ಲಿ ತಂದವರಾಗಿದ್ದಾರೆ. ಇವರ ಶಿಸ್ತಿನ ಜೀವನ, ಛಲಗಾರಿಕೆ, ನಿರಂತರ ಅಧ್ಯಯನ, ಸಮಯಪ್ರಜ್ಞೆ, ವಿದ್ಯಾರ್ಥಿಗಳ ಪ್ರೀತಿ ಹಾಗೂ ಆಡಳಿತ ಜ್ಞಾನ ಮುಂತಾದವುಗಳು ಮೆಚ್ಚುವಂತಹದ್ದಾಗಿದ್ದು, ಡಾ.ಎಸ್.ಎನ್.ಬಿರಾದಾರ ಅವರ ಒಡನಾಡ ನಮ್ಮ ಶ್ರೀಮಠದೊಂದಿಗೆ ಸುಮಾರು ದಶಕಗಳಿಂದ ಇದೆ. ಅವರ ಮೇಲೆ ವಿಶ್ವಗುರು ಬಸವಣ್ಣನವರ ಶ್ರೀರಕ್ಷೆ, ಡಾ.ಚನ್ನಬಸವ ಪಟ್ಟದ್ದೇವರ ಆಶೀರ್ವಾದ ಸದಾ ಇರಲಿ. ಮುಂದೆ ಅವರು ಅಮೃತ ಮಹೋತ್ಸವ ಆಚರಿಸಿಕೊಳ್ಳುವ ಯೋಗ ಬರಲಿ ಎಂದು ಪೂಜ್ಯರು ಆಶೀರ್ವದಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಎಸ್.ಎನ್.ಬಿರಾದಾರ ಅವರು ಶೈಕ್ಷಣಿಕ ರಂಗದಲ್ಲಿ ಇಲ್ಲಿಯವರೆಗೆ ಮಾಡಿರುವ ಸೇವೆ ಹಾಗೂ ನಮ್ಮ ಸಂಸ್ಥೆಯಲ್ಲಿ ಸಲ್ಲಿಸಿದ ಸೇವೆ ಮೆಚ್ಚುವಂತಹದ್ದು ಎಂದು ನುಡಿದರು.

ಪ್ರಶಸ್ತಿ ಪುರಸ್ಕøತರಾದ ಡಾ.ಎಸ್.ಎನ್.ಬಿರಾದಾರ ಅವರು ನನ್ನ ಆಯುಷ್ಯದುದ್ದಕ್ಕೂ ಪೂಜ್ಯರ ಸೇವೆ ಹಾಗೂ ವಿದ್ಯಾಪೀಠದ ಸೇವಾ ಕಾರ್ಯಗಳಲ್ಲಿ ಸಲಹೆ ಸಹಕಾರ ಹಾಗೂ ಹಿರೇಮಠ ಸಂಸ್ಥಾನ ವಿಶ್ವವಿದ್ಯಾಲಯವನ್ನಾಗಿ ಮಾಡಲು ನನ್ನ ಪೂರ್ಣ ಸಹಕಾರ ಇರುತ್ತದೆ ಎಂದು ನುಡಿದರು.

ಸಂಸ್ಥೆಯ ಆಡಳಿತಾಧಿಕಾರಿ ಶರಣ ಮೋಹನರೆಡ್ಡಿ ಅವರು ಸ್ವಾಗತಿಸಿದರು. ಶರಣ ಧನರಾಜ ಬಂಬುಳಗೆ, ಶರಣ ಮನ್ಮಥಪ್ಪ ಹುಗ್ಗೆ, ಶರಣ ಗುಂಡಪ್ಪ ಲಾದಾ ಇವರು ಉಪಸ್ಥಿತರಿದ್ದರು. ಪ್ರಸಾದ ನಿಲಯದ ಮಕ್ಕಳಿಂದ ವಚನ ಗಾಯನ ನಡೆಯಿತು. ಶ್ರೀಮಠದ ಸಿಬ್ಬಂದಿವರ್ಗ ಹಾಗೂ ಹಿರೇಮಠ ಸಂಸ್ಥಾನ ವಿದ್ಯಾಪೀಠದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.