ಡಾ. ಆನಂದ್ ತೇಲ್ತುಂಬ್ಡೆ ವಿರುದ್ಧ ದೇಶದ್ರೋಹದ ಪ್ರಕರಣ: ಪ್ರೊ. ಹುಡಗಿ ಬೇಸರ

ಕಲಬುರಗಿ.ಜು.15: ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬದುಕು- ಬರಹವನ್ನು ವಿಭಿನ್ನವಾಗಿ ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ ಮಹಾರಾಷ್ಟ್ರದ ಡಾ. ಆನಂದ್ ತೇಲ್ತುಂಬ್ಡೆಯವರನ್ನು ದೇಶ ದ್ರೋಹದ ಆರೋಪದ ಅಡಿಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿರುವುದು ದು:ಖದ ಸಂಗತಿ ಎಂದು ಪ್ರಗತಿಪರ ಚಿಂತಕ ಪ್ರೊ. ಆರ್.ಕೆ. ಹುಡಗಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
ದಲಿತ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳು ಹಾಗೂ ಸಂವಿಧಾನ ಮತ್ತು ಅಂಬೇಡ್ಕರ್ ಆಶಯದ ಹೊಸ ಸಾಂಸ್ಕøತಿಕ ಚಳುವಳಿ ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಹಮ್ಮಿಕೊಂಡ ಡಾ. ಅಂಬೇಡ್ಕರ್ ಚಿಂತನೆಯ ಪ್ರವರ್ತಕ ಸಂವಿಧಾನ ವಿರೋಧಿ ಸರ್ಕಾರದ ಪಿತೂರಿಗೆ ಡಾ. ಆನಂದ್ ತೇಲ್ತುಂಬ್ಡೆ 72ನೇ ಜನ್ಮದಿನ ಮತ್ತು ಇತರರ ಬಿಡುಗಡೆಗೆ ಆಗ್ರಹಿಸಿ ಆಯೋಜಿಸಿದ್ದ ನೆಲದ ಧ್ವನಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಸಂವೇದನೆ, ಪ್ರಜ್ಞೆ, ಮಾನವೀಯತೆ ಕಳೆದುಕೊಂಡಿರುವ ಇಂದಿನ ದಿನಮಾನಗಳಲ್ಲಿ ತೇಲ್ತುಂಬ್ಡೆ ಭರವಸೆಯ ತತ್ವಜ್ಞಾನಿಯಾಗಿದ್ದಾರೆ ಎಂದರು.
ಭಯದ ವಾತಾವರಣದಲ್ಲಿ ಮುಳುಗುತ್ತಿರುವ ನಾವುಗಳು ಸಂವಿಧಾನಕ್ಕೆ ಬದ್ಧರಾಗಿ, ಪರವಾಗಿ ಹೊರಾಟ ಮಾಡಬೇಕಾಗುತ್ತದೆ. ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯ ಸಮಾನತೆಗೆ ಹೋರಾಡಿದವರು ದೇಶ ವಿರೋಧಿಗಳಾಗುತ್ತಿರುವ ಪ್ರಜಾಪ್ರಭುತ್ವ ದೇಶದ ದುರಂತ ಎಂದು ಅವರು ಬಣ್ಣಿಸಿದರು.
ಡಾ. ಮೆರಾಜ್ ಪಟೇಲ್, ಮಲ್ಲೇಶಿ ಸಜ್ಜನ್, ಜಿ.ಕೆ. ಗೋಖಲೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹಿರಿಯ ನ್ಯಾಯವಾದಿ ಬಸಣ್ಣ ಸಿಂಗೆ ಅವರು ಅಧ್ಯಕ್ಷತೆ ವಹಿಸಿದ್ದರು. ಗೌರವ ಉಪಸ್ಥಿತರಿದ್ದ ರಮಾತಾಯಿ ಡಾ. ಆನಂದ್ ತೇಲ್ತುಂಬ್ಡೆ (ಡಾ. ಅಂಬೇಡ್ಕರ್ ಅವರ ಮೊಮ್ಮಗಳು) ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ನಿವೃತ್ತ ಅಧಿಕಾರಿ ಮಾರುತಿ ಗೋಖಲೆ ಅವರು ತೇಲ್ತುಂಬ್ಡೆ ಅವರ ಜೀವನ ಮತ್ತು ಹೋರಾಟವನ್ನು ಪರಿಚಯಿಸಿದರು. ದೇವೆಂದ್ರ ಹೆಗ್ಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಪಿ. ಸುಳ್ಳದ್ ಅವರು ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಮೆಂಗನ್ ಅವರು ಸ್ವಾಗತಿಸಿದರು. ಅಲ್ಲಮಪ್ರಭು ನಿಂಬರ್ಗಾ ಅವರು ವಂದಿಸಿದರು.