ಡಾ.ಅಮರೇಶ ಪಾಟೀಲ ಜನ್ಮದಿನ: ಕ್ಷಯರೋಗಿಗಳಿಗೆ ಹಣ್ಣು, ಪೌಷ್ಟಿಕಾಂಶದ ಪೌಡರ್ ವಿತರಣೆ

ಗಂಗಾವತಿ, ಮೇ.30: ಮಕ್ಕಳ ತಜ್ಞ ಡಾ.ಅಮರೇಶ್ ಪಾಟೀಲ್ ಅವರ ಜನ್ಮದಿನದ ಅಂಗವಾಗಿ ಇಲ್ಲಿನ ಉಪ ವಿಭಾಗ ಆಸ್ಪತ್ರೆಯ ಕ್ಷಯರೋಗಿಗಳಿಗೆ ಹಣ್ಣುಗಳು ಹಾಗೂ ಪೌಷ್ಟಿಕಾಂಶ ಪೌಡರ್ ವಿತರಿಸಿ ಜನ್ಮದಿನ ಆಚರಿಸಿಕೊಂಡರು.
ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ ಮಾತನಾಡಿ, ಡಾ.ಅಮರೇಶ್ ಪಾಟೀಲ್ ರವರು ತಮ್ಮ ಹುಟ್ಟುಹಬ್ಬವನ್ನು ರೋಗಿಗಳ ಜೊತೆಗೆ ಆಚರಿಸಿಕೊಂಡು ಅವರಿಗೆ ಆರೋಗ್ಯ ಸಲಹೆ ಜೊತೆಗೆ ಪೌಷ್ಟಿಕಾಂಶದ ವಿತರಿಸಿದ್ದು ವಿಶೇಷ ನಗರದ ಇತರರು ಕೂಡ ಇದನ್ನು ಪಾಲಿಸಿ ಸಮಾಜಕ್ಕೆ ನೆರವು ನೀಡಬೇಕು ಎಂದು ಸಲಹೆ ನೀಡಿದರು.
ಡಾ.ಅಮರೇಶ ಪಾಟೀಲ್ ಮಾತನಾಡಿ, ಕ್ಷಯರೋಗಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ. ರೋಗ ಲಕ್ಷಣಗಳು ಕಂಡುಬಂದರೆ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವವರು 6 ವರ್ಷದೊಳಗಿನ ಮಕ್ಕಳನ್ನು ಕರೆತಂದು ಅವರಿಗೆ ಕ್ಷಯರೋಗ ಬಾರದಂತೆ ನೀಡುವ ಮಾತ್ರೆಗಳನ್ನು ಪಡೆದು ಮಕ್ಕಳಿಗೆ 6 ತಿಂಗಳ ವರೆಗೆ ನೀಡಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ರಾಘವೇಂದ್ರ ಮಾತನಾಡಿ, ಸರ್ಕಾರ 2025 ರೊಳಗೆ ಕ್ಷಯರೋಗ ನಿರ್ಮೂಲನೆ ಮಾಡಲು ಪಣ ತೊಟ್ಟಿದ್ದು, ಸಾರ್ವಜನಿಕರು ಸಹಕಾರ‌ ನೀಡಬೇಕು ಎಂದರು.
ಕ್ಷಯರೋಗ ಆರೋಗ್ಯ ಪರಿವೀಕ್ಷಕ ಮಲ್ಲಿಕಾರ್ಜುನ ಮಾತನಾಡಿ, ಕ್ಷಯರೋಗ ಚಿಕಿತ್ಸೆಯಲ್ಲಿ ಇರುವವರಿಗೆ ಇಲಾಖೆಯಿಂದ ಉಚಿತವಾದ ಮಾತ್ರೆಗಳನ್ನು ನೀಡಲಾಗುತ್ತಿದೆ. ಹಾಗೇಯೆ ಅಡ್ಡಪರಿಣಾಮಗಳನ್ನು ನಿರ್ವಹಿಸುತ್ತಿದ್ದು, ಲಾಕ್ಡೌನ್ ಸಮಯದಲ್ಲಿ ಅನೇಕ ಬಡ ರೋಗಿಗಳಿಗೆ ಆಹಾರ ಧಾನ್ಯದ ಕೊರತೆಯಾಗಿದ್ದು ಸಮಾಜದ ಇತರರು ಕೂಡ ಇಂಥ ಬಡರೋಗಿಗಳಿಗೆ ಸಹಾಯ ಹಸ್ತ ನೀಡಬೇಕೆಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಹುಸೇನ್ ಭಾಷಾ, ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನದ ಕಾಶಿಮ್ ಬೀ, ದೇವೇಂದ್ರಗೌಡ, ಟಿಬಿ ಚಾಂಪಿಯನ್ ರೇಷ್ಮಾ ಬಾನು, ಅಮರ ಆಸ್ಪತ್ರೆಯ ಸಿಬ್ಬಂದಿಗಳಾದ ವಿರುಪಾಕ್ಷಿ, ಬಸವರಾಜ, ಅಶ್ವಿನಿ, ಶಾರದಾ, ಕಳಕಪ್ಪ, ಮರಿಯಪ್ಪ ಹಾಗೂ ರಮೇಶ ಭಾಗವಹಿಸಿದ್ದರು.