ಡಾ.ಅಪ್ಪಾ ರವರಿಗೆ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡಲು ಮನವಿ

ಕಲಬುರಗಿ: ನ12:ಸಾಹಿತ್ಯ ಮತ್ತು ಶಿಕ್ಷಣ ಬೋಧನೆ, ಪುಸ್ತಕ ರಚನೆ, ಸಾಹಿತ್ಯ, ಕವನ, ಶಿಕ್ಷಣದ ಪ್ರಚಾರ, ಸಾಕ್ಷರತೆಯ ಪ್ರಚಾರ, ಶಿಕ್ಷಣ ಸುಧಾರಣೆಗಳು ಇತ್ಯಾದಿಗಳನ್ನು ಶಿಕ್ಷಣ ಸಂಸ್ಥೆಯ ಮೂಲಕ ಮಾಡಿರುವ ಡಾ. ಶರಣಬಸಪ್ಪ ಅಪ್ಪಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಫಾರಸ್ಸು ಮಾಡಬೇಕು ಎಂದು ವೀರಶೈವ ಲಿಂಗಾಯತ ಸ್ವಾಭಿಮಾನಿ ಬಳಗದ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನವೆಂಬರ್ 14ರಂದು ಡಾ. ಅಪ್ಪಾ ಅವರ ಜನ್ಮ ದಿನವಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಜಿಲ್ಲೆಯ ಸೇಡಂಗೆ ಆಗಮಿಸುತ್ತಿದ್ದು, ಕಲಬುರಗಿ ನಗರಕ್ಕೂ ಆಗಮಿಸಿ, ಶರಣ ಸಂಸ್ಥಾನಕ್ಕೆ ಭೇಟಿ ನೀಡಿ ಶರಣಬಸವೇಶ್ವರರ ದರ್ಶನಾಶೀರ್ವಾದ ಹಾಗೂ ಡಾ. ಅಪ್ಪಾ ಅವರಿಗೆ ಶುಭ ಕೋರಿ, ಜನ್ಮ ದಿನದ ಉಡುಗೊರೆಯಾಗಿ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.

ಈ ಭಾಗದಲ್ಲಿ ಅರಿವು, ಶಿಕ್ಷಣ ಹಾಗೂ ಅನ್ನ ದಾಸೋಹ ಮಾಡುತ್ತ ಶರಣ ಸಂಸ್ಥಾನ ತನ್ನದೇ ಆದ ಅಸ್ತಿತ್ವ ಹೊಂದಿದೆ. ಅದಕ್ಕೆ ಡಾ. ಅಪ್ಪಾ ರವರ ಕೊಡುಗೆ ಮತ್ತು ಶ್ರಮವೂ ಅಪಾರವಿದೆ. ಕಲಬುರಗಿ ಎಜುಕೇಷನ್ ಹಬ್ ಮಾಡಿದ ಕಿರ್ತಿ ಶೀಕ್ಷಣ ತಜ್ಞರಾಗಿರುವ ಅಪ್ಪಾ ಅವರಿಗೆ ಸಲ್ಲುತ್ತದೆ ಅದಕ್ಕೆ ಪದ್ಮಶ್ರೀ ಪ್ರಶಸ್ತಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಕರ್ನಾಟಕದ ಲಿಂಗಾಯತ ಸಮುದಾಯ ಮೆಚ್ಚುವಂತಹ ಕೆಲಸ ಬೊಮ್ಮಾಯಿ ಅವರು ಮಾಡಬೇಕು. ಇದಕ್ಕೆಜಿಲ್ಲೆಯ ಎಲ್ಲಾ ಶಾಸಕರೂ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು ಎಂದಿದ್ದಾರೆ.