ಡಾ.ಅಪ್ಪಾಜಿ, ಡಾ.ಅವ್ವಾಜಿ ಮತ್ತು ಚಿರಂಜೀವಿ ಅಪ್ಪಾ ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧಾರ

ಕಲಬುರಗಿ; ನ.7:ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರ 87ನೇ ಜನ್ಮದಿನಾಚರಣೆ ಮತ್ತು ಮಾತೋಶ್ರೀ ಡಾ.ದಾಕ್ಷಾಯಣಿ ಅವ್ವಾಜಿ ಅವರ 51ನೇ ಜನ್ಮದಿನಾಚರಣೆ ಹಾಗೂ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರ 5ನೇ ಜನ್ಮದಿನಾಚರಣೆಯನ್ನು ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆಯುವ ಎಲ್ಲಾ ಶಿಕ್ಷಣ ಸಂಸ್ಥೆಗಳಿಂದ ಭವ್ಯವಾದ ರೀತಿಯಲ್ಲಿ ಇದೇ ನವೆಂಬರ್ 14 ರಂದು ಆಚರಿಸಲು ನಿರ್ಧರಿಸಲಾಗಿದೆ.

ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಸಭಾಂಗಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್ ವಿ.ನಿಷ್ಠಿ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಜರುಗಿದ ಸಭೆಯಲ್ಲಿ ವಿವಿಧ ಪದವಿ ಕಾಲೇಜುಗಳ ಪ್ರಾಚಾರ್ಯರು, ಶರಣಬಸವೇಶ್ವರ ವಸತಿ ಶಾಲೆ , ಅಪ್ಪಾ ಪಬ್ಲಿಕ್ ಸ್ಕೂಲ್, ಮತ್ತು ಶರಣಬಸವ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನ್‍ಗಳು ಪಾಲ್ಗೊಂಡಿದ್ದರು.

ನವೆಂಬರ್ ತಿಂಗಳಿನಲ್ಲಿ ಬರುವ ಡಾ.ಅಪ್ಪಾಜಿ, ಡಾ.ಅವ್ವಾಜಿ ಮತ್ತು ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರ ಜನ್ಮದಿನದ ಅಂಗವಾಗಿ ನವೆಂಬರ್ 10 ರಿಂದ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯದಲ್ಲಿ ಐದು ದಿನಗಳ ಕಾಲ ಆಚರಿಸಲು ವಿವರಿಸಲಾಯಿತು.

ಜನ್ಮದಿನಾಚರಣೆಯ ಅಂಗವಾಗಿ ಎಲ್ಲಾ ಸಂಸ್ಥೆಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಕವಿಗೋಷ್ಠಿಗಳು ಮತ್ತು ಕ್ರೀಡಾಕೂಟಗಳನ್ನು ಆಯೋಜಿಸುತ್ತಿವೆ, ಇದರಲ್ಲಿ ಎಲ್ಲಾ ಶಾಲಾಕಾಲೇಜುಗಳÀ ವಿದ್ಯಾರ್ಥಿಗಳನ್ನು ಭಾಗವಹಿಸಲು ಆಹ್ವಾನಿಸಲಾಗುತ್ತದೆ ಮತ್ತು ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ನೀಡಲಾಗುವುದು. ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಡಾ.ಅಪ್ಪಾಜಿ ಮತ್ತು ಡಾ.ಅವ್ವಾಜಿಯವರ ಕೊಡುಗೆಯನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ವಿಚಾರ ಸಂಕಿರಣಗಳಲ್ಲಿ, ಕಾರ್ಯಾಗಾರಗಳಲ್ಲಿ ಮತ್ತು ಭಾಷಣ ಸ್ಪರ್ಧೆಗಳಲ್ಲಿ ಚರ್ಚಿಸಲಾಗುವುದು.

ಕಲಬುರಗಿ ನಗರದ ಪೂಜ್ಯ ಬಸವರಾಜಪ್ಪ ಅಪ್ಪಾ ಸ್ಮರಣಾರ್ಥ ಭವನದಲ್ಲಿ ನವೆಂಬರ್ 14 ರಂದು ನಡೆಯಲಿರುವ ಜನ್ಮದಿನಾಚರಣೆಯ ಸಮಾರಂಭದಲ್ಲಿ ಭಾಗವಹಿಸಲಿರುವ ವಿವಿಧ ಕ್ಷೇತ್ರಗಳÀ ಗಣ್ಯರ ಹೆಸರುಗಳನ್ನು ನಂತರ ನಿರ್ಧರಿಸಲಾಗುವುದು ಎಂದು ಶ್ರೀ ಬಸವರಾಜ ದೇಶಮುಖ ತಿಳಿಸಿದರು.