ಡಾ.ಅನುಷ್ಕಾ ದೆವಣಿಕರ್‍ಗೆ ಗೌರವ

ಬಾಗಲಕೋಟ್, ನ.19-ಡಾ.ಅನುಷ್ಕಾ ದೆವಣಿಕರ್ ಅವರನ್ನು ಭಾರತೀಯ ವೈದ್ಯಕೀಯ ಸಂಘ ‘ಡಾ.ಕೇತನ್ ದೇಸಾಯಿ ಯುವ ನಾಯಕ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಡಾ.ಅನುಷ್ಕಾ ದೆವಣಿಕರ್ ಅವರು ಭಾರತೀಯ ವೈದ್ಯಕೀಯ ಸಂಘ, ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ನವನಗರ ಶಾಖೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು ವೈದ್ಯಕೀಯ ಕ್ಷೇತ್ರದಲ್ಲಿನ ಅವರ ಅನುಪಮ ಸೇವೆಗೆ ಈ ಪ್ರಶಸ್ತಿ ದೊರೆತಿದೆ.
ಭಾರತೀಯ ವೈದ್ಯಕೀಯ ಸಂಘವು ಡಾ.ಅನುಷ್ಕಾ ದೆವಣಿಕರ್ ಅವರ ಅನುಕರಣೀಯ ಸೇವೆ, ನಾಯಕತ್ವದ ಗುಣ, ಆರೋಗ್ಯಕರ ಭಾರತದ ರಾಯಭಾರಿಯಾಗಿ ಅವರು ನಿರ್ವಹಿಸಿದ ಪಾತ್ರವನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನವೆಂಬರ್ 14, 2021 ರಂದು ನವದೆಹಲಿಯ ಭಾರತೀಯ ವೈದ್ಯಕೀಯ ಸಂಘದ ಸಭಾಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಡಾ.ಅನುಷ್ಕಾ ದೆವಣಿಕರ್ ಅವರಿಗೆ ನೀತಿ ಆಯೋಗದ ಸದಸ್ಯರಾದ ಡಾ.ವಿ.ಕೆ.ಪಾಲ್, ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಮತ್ತು ಕಾರ್ಯದರ್ಶಿ ಡಾ.ಜಯಂತ ಲೆಲೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಪ್ರಸ್ತುತ ಡಾ.ಅನುಷ್ಕಾ ದೆವಣಿಕರ್ ಬಿ.ವಿ.ವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಸೂಕ್ಷ್ಮಜೀವಶಾಸ್ತ್ರ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವರು.
ಭಾರತೀಯ ವೈದ್ಯಕೀಯ ಸಂಘದ ಪ್ರಶಸ್ತಿಗೆ ಭಾಜನರಾದ ಡಾ.ಅನುಷ್ಕಾ ದೆವಣಿಕರ್ ಅವರನ್ನು ಈ ಸಾಧನೆಗಾಗಿ ಶಾಸಕರು ಮತ್ತು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ ಮತ್ತು ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ ಅಭಿನಂದಿಸಿದ್ದಾರೆ.