
ಮಹೇಶ್ ಕುಲಕರ್ಣಿ
ಕಲಬುರಗಿ:ಏ.27: ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದಾಗಿರುವ ಜೇವರ್ಗಿ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಮಧ್ಯೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.
ಈಗಾಗಲೇ 2013 ಮತ್ತು 2018ರ ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯ್‍ಸಿಂಗ್ ಈ ಬಾರಿ ಹ್ಯಾಟ್ರಿಕ್ ಕನಸಿನೊಂದಿಗೆ ಕ್ಷೇತ್ರದಾದ್ಯಂತ ಬಿರುಸಿನ ಸಂಚಾರ ಆರಂಭಿಸಿದ್ದಾರೆ. ಮತ್ತೊಂದೆಡೆ, ಇದೇ ಮೊದಲ ಬಾರಿಗೆ ಬಿಜೆಪಿ ಟಿಕೆಟ್ ಗಿಟ್ಟಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಮತ್ತು ಇತ್ತೀಚೆಗಷ್ಟೇ ಬಿಜೆಪಿ ತೊರೆದಿರುವ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಮೂವರೂ ಸ್ಥಳೀಯರೇ ಆಗಿರುವುದರಿಂದ ಈ ಹಿಂದಿನ ಎಲ್ಲ ಚುನಾವಣೆಗಳಿಗಿಂತಲೂ ಮೊನಚಾದ ಸ್ಪರ್ಧೆಗೆ ಕ್ಷೇತ್ರ ಸಾಕ್ಷಿಯಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಹೇಳುತ್ತಾರೆ.
ಗಾಣಿಗ ಸಮುದಾಯವನ್ನೂ ಒಳಗೊಂಡಂತೆ ಲಿಂಗಾಯತ, ಮುಸ್ಲಿಂ, ಕುರುಬ, ಕೋಲಿ, ಬಂಜಾರ ಮತ್ತು ಬ್ರಾಹ್ಮಣ ಸಮುದಾಯದ ಮತಗಳು ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿವೆ. ಪಕ್ಷ ಪ್ರೀತಿಗಿಂತಲೂ ವ್ಯಕ್ತಿನಿಷ್ಠೆಗೆ ಹೆಚ್ಚು ಒತ್ತು ನೀಡುವ ಮತದಾರರು ಕ್ಷೇತ್ರದಲ್ಲಿದ್ದಾರೆ. ಹಾಗಾಗಿ, ವೈಯಕ್ತಿಕ ನೆಲೆಗಟ್ಟಿನಲ್ಲಿ ಡಾ.ಅಜಯ್‍ಸಿಂಗ್, ಶಿವರಾಜ್ ಪಾಟೀಲ್ ರದ್ದೇವಾಡಗಿ ಹಾಗೂ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಎಷ್ಟು ಮತಗಳನ್ನು ಕ್ರೋಢೀಕರಿಸಬಲ್ಲರು ಎಂಬುದರ ಮೇಲೆ ಕ್ಷೇತ್ರದಲ್ಲಿ ಗೆಲುವು ನಿರ್ಧಾರ ಆಗಲಿದೆ ಎಂದು ಕ್ಷೇತ್ರದ ಪ್ರಜ್ಞಾವಂತ ಮತದಾರರು ಅಭಿಪ್ರಾಯಪಡುತ್ತಾರೆ.
ಹಾಗೆ ನೋಡಿದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಡಾ.ಅಜಯ್ 68508 ಮತಗಳೊಂದಿಗೆ ಶೇ.42.6ರಷ್ಟು ಮತಗಳನ್ನು ಪಡೆದಿದ್ದರು. ಇನ್ನೊಂದೆಡೆ, ಆಗ ಬಿಜೆಪಿ ಅಭ್ಯರ್ಥಿಯಾಗಿ ಪ್ರಬಲ ಸ್ಪರ್ಧೆಯೊಡ್ಡಿದ್ದ ದೊಡ್ಡಪ್ಪಗೌಡ ಪಾಟೀಲ್ 52,452 ಮತಗಳೊಂದಿಗೆ ಶೇ.32.43ರಷ್ಟು ಮತಗಳನ್ನು ಗಳಿಸಿದ್ದರು. ಆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದ ಕೇದಾರಲಿಂಗಯ್ಯ ಹಿರೇಮಠ 35,691 ಮತಗಳೊಂದಿಗೆ ಶೇ.22.07ರಷ್ಟು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಈ ಬಾರಿ ಕ್ಷೇತ್ರವು ಕೆಲವು ಸ್ಥಿತ್ಯಂತರಗಳಿಗೆ ತೆರೆದುಕೊಂಡಿದೆ. ಈವರೆಗೆ ಬಿಜೆಪಿಯಲ್ಲಿದ್ದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಮತ್ತೊಂದೆಡೆ, ಜೆಡಿಎಸ್ ತೊರೆದ ಕೇದಾರಲಿಂಗಯ್ಯ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಸೇರ್ಪಡೆಗೊಂಡು ಡಾ.ಅಜಯ್ ಅವರ ‘ಕೈ’ ಬಲಪಡಿಸುವ ವಿಶ್ವಾಸದಲ್ಲಿದ್ದಾರೆ. ಈ ವಿದ್ಯಮಾನಗಳ ಮಧ್ಯೆ, ಆರ್‍ಎಸ್‍ಎಸ್ ಹಾಗೂ ಬಿಜೆಪಿ ಹಿರಿಯ ಮುಖಂಡರೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಂಡಿರುವ ಶಿವರಾಜ್ ಪಾಟೀಲ್ ಈ ಬಾರಿ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಬಿಜೆಪಿಯ ಸಾಂಪ್ರದಾಯಿಕ ಮತಗಳ ಜೊತೆಗೆ ವೈಯಕ್ತಿಕ ವರ್ಚಸ್ಸು ಹಾಗೂ ಮೋದಿ ಹವಾ ಆಧಾರದ ಮೇಲೆ ತಮಗೆ ವಿಜಯಲಕ್ಷ್ಮಿ ಒಲಿಯಲಿದ್ದಾಳೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಕುತೂಹಲ ಸೃಷ್ಟಿಸಿದ ನರಿಬೋಳ ಸ್ಪರ್ಧೆ
ಬಿಜೆಪಿ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಸ್ತುತ ಕಣದಲ್ಲಿರುವ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಈ ಬಾರಿ ಯಾವ ಯಾವ ಸಮುದಾಯದ ಮತಗಳನ್ನು ಎಷ್ಟು ಪ್ರಮಾಣದಲ್ಲಿ ಆಕರ್ಷಿಸಲಿದ್ದಾರೆ ಎಂಬ ಅಂಶ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ.
ವೈಯಕ್ತಿಕ ನೆಲೆಗಟ್ಟಿನಲ್ಲಿ ಮುಸ್ಲಿಂ ಸಮುದಾಯ ಸೇರಿದಂತೆ ಬಹುತೇಕ ಎಲ್ಲ ವರ್ಗಗಳೊಂದಿಗೆ ನರಿಬೋಳ ಅವರಿಗೆ ಉತ್ತಮ ಸಂಬಂಧವಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮತಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಡಾ.ಅಜಯ್‍ಸಿಂಗ್ ಮತ್ತು ದೊಡ್ಡಪ್ಪಗೌಡ ಎಷ್ಟರಮಟ್ಟಿಗೆ ಯಶಸ್ಸು ಸಾಧಿಸಲಿದ್ದಾರೆ ಎಂಬ ಅಂಶ ಮತ ಕ್ರೋಢೀಕರಣದ ಆರೋಹಣ-ಅವರೋಹಣ ನಿರ್ಧರಿಸಲಿದೆ. ಇನ್ನುಳಿದಂತೆ ಕ್ಷೇತ್ರದ ಮತದಾರರು ಪ್ರತಿ ಚುನಾವಣೆಯಲ್ಲಿಯೂ ವಾಸ್ತವಕ್ಕೆ ಒಗ್ಗುವ ಪ್ರಜ್ಞಾವಂತಿಕೆ ಪ್ರದರ್ಶಿಸುವುದರಿಂದ ಅಭ್ಯರ್ಥಿಗಳ ಪೈಕಿ ಯಾರು ವಿಧಾನಸೌಧದ ಮೆಟ್ಟಿಲು ಏರಲಿದ್ದಾರೆ ಎಂಬುದು ಕೊನೆಯ ಕ್ಷಣದವರೆಗೆ ಕುತೂಹಲ ಕಾಯ್ದುಕೊಳ್ಳಲಿದೆ.