
ರಾಮದುರ್ಗ,ಏ.15: ಸಮಾನತೆಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಮಹಾನ್ಪುರಷರ ಜಯಂತಿಗಳು ಕೇವಲ ಕಾಟಾಚಾರದ ಆಚರಣೆಗಳಾಗಬಾರದು. ಜಯಂತಿ ಸರಳವಾಗಿದ್ದರೂ ಅರ್ಥಪೂರ್ಣವಾಗಿರಬೇಕು ಎಂದು ತಹಶೀಲ್ದಾರ ಬಸವರಾಜ ನಾಗರಾಳ ಹೇಳಿದರು.
ರಾಮದುರ್ಗದ ಪುರಸಭೆಯ ಸಾಂಸ್ಕೃತಿಕ ಭವನದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರರ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರರು ಬರೆದ ಸಂವಿಧಾನವು ಕಾನೂನಿನ ಎಲ್ಲ ಸ್ಥರಗಳು ಸಮಾಜದ ಉದ್ಧಾರದ ಸಂಕೇತವಾಗಿದೆ ಎಂದು ಹೇಳಿದರು.
ಪುರಸಭೆಯ ಮುಖ್ಯಾಧಿಕಾರಿ ರವಿ ಬಾಗಲಕೋಟಿ ಪ್ರಾಸ್ತಾವಿಕ ಮಾತನಾಡಿ, ಪ್ರಾಥಮಿಕ ಶಿಕ್ಷಣ ಪಡೆಯುವ ಹೊತ್ತಿನಲ್ಲಿಯೇ ಅಸ್ಪೃಶ್ಯತೆಯ ನೋವು ಅನುಭವಿಸಿದ ಡಾ. ಬಿ.ಆರ್. ಅಂಬೇಡ್ಕರರು ವಿದ್ಯೆಯಿಂದ ಏನನ್ನಾದರೂ ಗೆಲ್ಲಬಹುದು ಎಂದು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು ಎಂದು ಹೇಳಿದರು.
ಬೀಳಗಿ ತಾಲ್ಲೂಕಿನ ಕಾತರಕಿಯ ಡಾ. ಅಂಬೇಡ್ಕರ ಚಿಂತಕ ಮಹಾದೇವ ಸಿದಗೋಣಿ ವಿಶೇಷ ಉಪನ್ಯಾಸ ನೀಡಿದರು. ತಾಲ್ಲೂಕು ಪಂಚಾಯ್ತಿ ಇಒ ಪ್ರವೀಣಕುಮಾರ ಸಾಲಿ, ಸಿಪಿಐ ಈರಣ್ಣ ಪಟ್ಟಣಶೆಟ್ಟಿ, ಬಿಇಒ ಎನ್.ವೈ. ಕುಂದರಗಿ, ಸಮಾಜ ಕಲ್ಯಾಣಾಧಿಕಾರಿ ಬಸವರಾಜ ಯಾದವಾಡ, ಶಿವಕ್ಕ ಮಾದರ, ಸಂಗೀತಾ ಕುರೇರ ಇತರರು ವೇದಿಕೆ ಮೇಲಿದ್ದರು.
ಇದೇ ವೇಳೆ ಓದಿನಲ್ಲಿ ಅತ್ಯುನ್ನತ ಸಾಧನೆ ಮಾಡಿದ ತಾಲ್ಲೂಕಿನ ಆರು ಜನ ವಿದ್ಯಾರ್ಥಿಗಳು ಮತ್ತು ಗಣ್ಯರನ್ನು ತಾಲ್ಲೂಕು ಆಡಳಿತವು ಸನ್ಮಾನಿಸಿತು. ಸುನಂದಾ ವಾಲಿ ಸ್ವಾಗತಿಸಿದರು. ಪ್ರಕಾಶ ಸಾಲಾಪೂರ ಕ್ರಾಂತಿಗೀತೆ ಹಾಡಿದರು.
ರಾಮದುರ್ಗದ ಅಂಬೇಡ್ಕರ ನಗರ, ಗಾಂಧೀ ನಗರ ಮತ್ತು ಗಡದ ಗಲ್ಲಿಯಲ್ಲಿಯೂ ಅಂಬೇಡ್ಕರರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿದರು.