ಡಾ. ಅಂಬೇಡ್ಕರ ಜಯಂತಿ ಆಚರಣೆ

ಹುಬ್ಬಳ್ಳಿ,ಏ15: ನಗರದ ಭಂಡಿವಾಡ ಅಗಸಿ, ಕೆ.ಇ.ಬಿ ಹತ್ತಿರ, ಜೈಭೀಮ್ ನಗರದಲ್ಲಿರುವ ಸಿದ್ಧಾರ್ಥ ಸೇವಾ ಸಂಘದ ವತಿಯಿಂದ ಡಾ. ಬಾಬಾಸಾಹೇಬ ಅಂಬೇಡ್ಕರ ಭವನದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ ರವರ 133ನೇ ಜಯಂತ್ಯೋತ್ಸವವನ್ನು ಆಚರಿಸಲಾಯಿತು. ಡಾ. ಬಾಬಾಸಾಹೇಬ ಅಂಬೇಡ್ಕರ ರವರ ಪುತ್ಥಳಿಗೆ ಸಂಘದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಡಾ. ಬಾಬಾಸಾಹೇಬ ಅಂಬೇಡ್ಕರ ಭವನದಲ್ಲಿಯ ವೇದಿಕೆಯ ಗೋಡೆಯ ಮೇಲೆ ನೂತನವಾಗಿ ನಿರ್ಮಿಸಿದ ಬುದ್ಧ, ಬಸವ, ಅಂಬೇಡ್ಕರ ರವರ ಕಂಚಿನ ಪ್ರತಿಮೆಗಳನ್ನು ಪ.ಪೂ.ಮಾತೋಶ್ರೀ ಹುಲಿಗೆಮ್ಮಾ ಪೋಸಾ ಅಮ್ಮನವರು ಲೋಕಾರ್ಪಣೆಗೊಳಿಸಿದರು. ಸಂಘದ ಆಧ್ಯಕ್ಷ ವಿರುಪಾಕ್ಷಿ ಚಲವಾದಿ ಸೇರಿದಂತೆ ವೇದಿಕೆ ಮೇಲೆ ಇನ್ನಿತರ ಗಣ್ಯವ್ಯಕ್ತಿಗಳು ಉಪಸ್ಥಿತರಿದ್ದರು.

ಮಕ್ಕಳಿಗೆ ಹಮ್ಮಿಕೊಂಡಿದ್ದ ಸಾಂಸ್ಕøತಿಕ, ವಚನ, ಸಾಹಿತ್ಯ, ಕ್ರೀಡೆಗಳು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಜೊತೆಗೆ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಬ್ಯಾಗ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಲಕ್ಷ್ಮಣ ಬಕ್ಕಯ್ಯ, ಆರೋಗ್ಯ ಇಲಾಖೆ ನೌಕರರ ಅಧ್ಯಕ್ಷ ರಂಜಿತ ಮಾನಕರ, ನ್ಯಾಯವಾದಿಗಳಾದ ಬಸವರಾಜ ಬೊಮ್ಮನಾಳ, ಅಶೋಕ ಗಂಗೂರ, ಕುಮಾರ ದಲಿತ ವಿಮೋಚನಾ ಸಮಿತಿ ಅಧ್ಯಕ್ಷರಾದ ಸುರೇಶ ಖಾನಾಪುರ, ಗುರು ಬನ್ನಿಕೊಪ್ಪ, ಮೂರ್ತಿ ಕಲಾವಿದ ಮಧುಪ್ರಕಾಶ ಗದಗ, ಗುರು ಕ್ವಾಟಿ, ಬಸವರಾಜ ಪಾಟೀಲ, ಶಿವಮೂರ್ತಿ ಚಲವಾದಿ, ಬಸವರಾಜ ಕಠಾರೆ, ರಾಜಕುಮಾರ ನಾಗಮನ್, ಪರಶುರಾಮ ಸುಳ್ಳದ, ರವಿಕುಮಾರ ಮಡ್ಡಿ, ಸಿದ್ಧಾರ್ಥ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಓಣಿಯ ಮಹಿಳೆಯರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. ಶ್ರೀ ಗುರು ಬನ್ನಿಕೊಪ್ಪ ರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

ಕೊನೆಗೆ ಸಾರ್ವಜನಿಕ ಅನ್ನಸಂತರ್ಪಣೆ ಮಾಡಲಾಯಿತು. ಸಂಜೆ 5 ರಿಂದ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಭಾವಚಿತ್ರವನ್ನು ತೆರೆದ ವಾಹನದಲ್ಲಿರಿಸಿ ಮೆರವಣಿಗೆ ಮಾಡಲಾಯಿತು.