ಡಾ.ಅಂಬೇಡ್ಕರ್ ಪರಿನಿರ್ವಾಣ ದಿನವೇ ಗೊತ್ತಿಲ್ವಂತೆ – ಬಿಇಒ ಮತ್ತು ಸಿಬ್ಬಂದಿ ವಿರುದ್ಧ ದ.ಸಂ.ಸ ಆರೋಪ.

ಕೂಡ್ಲಿಗಿ.ಡಿ. 7:  –   ದೇಶಕ್ಕೆ ಸಂವಿಧಾನವನ್ನು ರಚಿಸಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು  ಆಚರಿಸದೇ  ಹಾಗೂ ಯಾವ ದಿನವೆನ್ನುವುದೇ ಗೊತ್ತಿಲ್ಲವೆಂದು ಹೇಳಿ ಒಬ್ಬ ರಾಷ್ಟ್ರನಾಯಕರನ್ನೇ ಅವಮಾನ ಮಾಡಿರುವ ತಾಲೂಕು ಬಿಇಒ ಮತ್ತು ಕಚೇರಿ ಸಿಬ್ಬಂದಿಗಳನ್ನು  ಅಮಾನತು ಮಾಡುವಂತೆ ಆಗ್ರಹಿಸಿ ಕೂಡ್ಲಿಗಿ ತಹಸೀಲ್ದಾರ್ ಜಗದೀಶ್ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ್ ಬಣ) ಕೂಡ್ಲಿಗಿ ತಾಲೂಕು ಪದಾಧಿಕಾರಿಗಳು ಸೋಮವಾರ ಆರೋಪದ ಮನವಿ ಸಲ್ಲಿಸಿದ್ದಾರೆ.
ಇಡೀ ದೇಶದ ಆಡಳಿತ ಸಂವಿಧಾನದ ಅಡಿಯಲ್ಲಿ ನಡೆಯುತ್ತಿದೆ  ಅಲ್ಲದೇ, ಇಡೀ ದೇಶವೇ ಡಾ.ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಂದು ಸ್ಮರಣೆ ಮಾಡುತ್ತಿದೆ. ಆದರೆ, ಕೂಡ್ಲಿಗಿ ತಾಲೂಕು  ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಬಿಇಒ ಯುವರಾಜ ನಾಯ್ಕ ಹಾಗೂ ಕಚೇರಿ ಸಿಬ್ಬಂದಿ  ಎಫ್ ಡಿಎ ಗೋಪಾಲ್ ಮತ್ತು ವ್ಯವಸ್ಥಾಪಕ ರೇವಣ ಸಿದ್ದಪ್ಪ ಇವರು ಇಲಾಖೆಯ ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ ಡಾ.ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಗೊತ್ತಿಲ್ಲವಂತೆ. ಈ ಕುರಿತು ಕೇಳಿದರೆ, ಯಾವ ದಿನವೆನ್ನುವುದೇ ಗೊತ್ತಿಲ್ಲ ಹಾಗೂ ತಹಸೀಲ್ದಾರ್ ಕಚೇರಿಯಿಂದ ನಮಗೆ ಯಾವುದೇ ಆದೇಶ ಬಂದಿಲ್ಲವೆಂದು ಹೇಳುವ ಮೂಲಕ ಒಬ್ಬ ರಾಷ್ಟ್ರನಾಯಕ ಹಾಗೂ ಸಂವಿಧಾನ ಶಿಲ್ಪಿ ಬಾಬಾಸಾಹೇಬ ಡಾ.ಬಿ ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ದಸಂಸ ತಾಲೂಕು ಸಂಚಾಲಕ ಹಾಗೂ ವಕೀಲ ಡಿ.ಎಚ್.ದುರುಗೇಶ್ ಸೇರಿ ಇತರರು ಮನವಿಯಲ್ಲಿ ಆರೋಪಿಸಿದ್ದಾರೆ.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಜಗದೀಶ್ ಅವರು, ಈ ಕುರಿತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಡಿ.ಟಿ.ನಾಗರಾಜ, ಎಚ್.ಅನಿಲ್ ಇತರರಿದ್ದರು.