
ಸಂಜೆವಾಣಿ ವಾರ್ತೆ
ಸಂಡೂರು: ಏ: 15: ಭಾರತದ ಸಂವಿಧಾನ ಶಿಲ್ಪ ಡಾ. ಬಿ.ಅರ್. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಇಂದು ಭಾರತದ ಪ್ರತಿಯೊಬ್ಬ ವ್ಯಕ್ತಿಯು ಸ್ವತಂತ್ರ್ಯ, ಸಮಾನತೆ ಹಾಗೂ ಏಕತೆಯಿಂದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎನ್.ಕೆ. ವೆಂಕಟೇಶ್ ತಿಳಿಸದರು.
ಅವರು ಇಂದು ಪಟ್ಟಣದ ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ಸಂಘ ಇತರ ಸಂಘಟನೆಗಳು ಹಾಗೂ ಇಲಾಖೆಯವತಿಯಿಂದ ಹಮ್ಮಿಕೊಂಡಿದ್ದ 132ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ ಚುನಾವಣೆಯ ಹಿನ್ನಲೆಯಲ್ಲಿ ಸರಳ ಹಾಗೂ ಸಾಮೂಹಿಕವಾಗಿ ಅಂಬೇಡ್ಕರ್ ಜಯಂತಿಯನ್ನು ಕಛೇರಿಯಲ್ಲಿ ಆಚರಿಸುತ್ತಿದ್ದೇವೆ, ಅಂಬೇಡ್ಕರ್ ಹಾಕಿಕೊಟ್ಟಂತಹ ಸಂವಿಧಾನ ಇಂದು ಜಗತ್ತಿನಲ್ಲಿಯೇ ಶ್ರೇಷ್ಠವಾದ ಸಂವಿಧಾನವಾಗಿದೆ, ಅದರ ಅಡಿಯಲ್ಲಿ ಭಾರತ ಭದ್ರವಾದ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಜಗತ್ತಿನಲ್ಲಿ ಹೊರ ಹೊಮ್ಮಿದೆ ಅಂತಹ ಶ್ರೇಷ್ಠ ವ್ಯಕ್ತಿಯು ಮೊದಲು ಶಿಕ್ಷಣ, ಸಂಘಟನೆ, ಹೋರಾಟದ ತತ್ವಗಳನ್ನು ನೀಡಿದರು, ಎಲ್ಲಿಯ ವರೆಗೆ ಶಿಕ್ಷಣ ಪಡೆಯುವುದಿಲ್ಲವೋ ಅಲ್ಲಿಯ ವರೆಗೆ ನಮಗೆ ಎಲ್ಲಿಯ ಸ್ವಾತಂತ್ರ್ಯ, ಅದನ್ನು ಪಡೆಯಬೇಕಾದರೆ ಶಿಕ್ಷಣ ಬಹು ಮುಖ್ಯ, ಶಿಕ್ಷಣ ಪಡೆದು ಸಂಘಟಿತರಾಗಬೇಕು ಅಗ ತುಳಿತಕ್ಕೆ ಒಳಗಾದ ಪ್ರತಿಯೊಬ್ಬರೂ ಸಹ ಮೇಲೆ ಬರಲು ಸಾಧ್ಯ, ಶಿಕ್ಷಣ ವಿಲ್ಲದೇ ತಾವೇ ಬಡಿದಾಡುತ್ತಾ ಬದುಕನ್ನು ಕಳೆಯಬೇಡಿ ಎಂಬ ಕರೆ ಶಿಕ್ಷಣದ ಮಹತ್ವವನ್ನು ತಿಳಿಸುತ್ತದೆ, ಅದ್ದರಿಂದ ಪ್ರತಿಯೊಬ್ಬರೂ ಸಹ ಸರಿಯಾದ ಶಿಕ್ಷಣ ಪಡೆಯುವ ಮೂಲಕ ದೇಶದ ಸತ್ಪ್ರಜೆಯಾಗಬೇಕು ಎನ್ನುವ ಕನಸ್ಸನ್ನು ಕಂಡವರು ಅಂತಹ ಮಹಾನ್ ವ್ಯಕ್ತಿಯ ಕನಸ್ಸನ್ನು ನಾವೆಲ್ಲರೂ ಸಹ ಶಿಕ್ಷಣ ಪಡೆಯುವ ಮೂಲಕ ನನಸಾಗಿಸೋಣ ಎಂದರು.
ಜಯಂತಿಯಲ್ಲಿ ದಲಿತ ಮುಖಂಡರಾದ ರಾಮಕೃಷ್ಣ ಹೆಗಡೆ, ಶಿವಲಿಂಗಪ್ಪ, ನಿಂಗಪ್ಪ ಐಹೊಳೆ ಇತರ ಹಲವಾರು ಮುಖಂಡರು, ಕಚೇರಿಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಸರಳವಾಗಿ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಿದರು.