ಡಾ. ಅಂಬೇಡ್ಕರ್ ದೇಶದ ಬಹುದೊಡ್ಡ ಪ್ರಾಮಾಣಿಕ ಪತ್ರಕರ್ತ: ವಿ.ಟಿ. ಕಾಂಬಳೆ

ಕಲಬುರಗಿ,ಸೆ.18: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ದೇಶದ ಬಹುದೊಡ್ಡ ಪ್ರಾಮಾಣಿಕ ಪತ್ರಕರ್ತರಾಗಿದ್ದರು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ. ವಿ.ಟಿ. ಕಾಂಬಳೆ ಅವರು ಹೇಳಿದರು.
ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕೋದ್ಯಮ ಅಂದು-ಇಂದು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದಲ್ಲಿ ಜಾಗ್ರತಿ ಮೂಡಿಸುವ ಕೆಲಸವಾಗಬೇಕು ಎಂದರು.
ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿ ಮತ್ತು ಪ್ರಾಮಾಣಿಕತೆ ಇರಬೇಕು. ಡಾ. ಬಾಬಾಸಾಹೇಬ ಅಂಬೇಡ್ಕರ್ ಅಂಥವರು ಉತ್ತಮ ಪತ್ರಕರ್ತರಾಗಿದ್ದರು. ಸ್ವತ: ಬಾಬಾಸಾಹೇಬರು ನಾಲ್ಕು ಪತ್ರಿಕೆಗಳನ್ನು ನಡೆಸಿ ಶೋಷಿತರಿಗೆ ಧ್ವನಿಯಾದರು ಎಂದು ಅವರು ಹೇಳಿದರು.
ಹಿರಿಯ ಪತ್ರಕರ್ತ ಗಣೇಶ್ ಅಮಿನಗಡ ಅವರು ಮಾತನಾಡಿ, ಪತ್ರಿಕೋದ್ಯಮ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸೂಕ್ಷ್ಮತೆಯುಳ್ಳವರಾಗಿರಬೇಕು. ದೇಶದ ಪ್ರತಿಯೊಂದು ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುವ ಮನೋಭಾವ ಹೊಂದಿರಬೇಕು. ಅಕ್ಷರಗಳು ತಪ್ಪಿಲ್ಲದಂತೆ ಬರೆಯುವುದು ಪತ್ರಕರ್ತರಾಗುವವರ ಮೊದಲ ಲಕ್ಷಣವಾಗಿದೆ ಎಂದರು. ಪೆÇ್ರ. ಡಿ.ಬಿ. ಪಾಟೀಲ್ ಅವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ. ಕೆ.ಎಂ. ಕುಮಾರಸ್ವಾಮಿ, ಡಾ. ರಾಜಕುಮಾರ್ ದಣ್ಣೂರ್, ಡಾ. ಅಶೋಕ್ ದೊಡ್ಮನಿ, ವೆಂಕಟೇಶ್ ಕಡೂನ್, ರೀತು ತಳವಾರ್ ಮುಂತಾದವರು ಉಪಸ್ಥಿತರಿದ್ದರು. ನಾಗರಾಜ್ ಗದ್ದಿ ಅವರು ಪ್ರಾರ್ಥನಾಗೀತೆ ಹಾಡಿದರು. ನಾಗೇಶ್ ಹೇರೂರ್ ಅವರು ಕಾರ್ಯಕ್ರಮ ನಿರೂಪಿಸಿದರು. ಪೃಥ್ವಿರಾಜ್ ಅವರು ವಂದಿಸಿದರು.