ಡಾ.ಅಂಬೇಡ್ಕರ್ ಜಯಂತಿ; ಮದ್ಯಪಾನ ನಿಷೇಧಿಸಲು ಸಿಎಂಗೆ ಪತ್ರ

ವಿಜಯಪುರ:ಮಾ.1: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನದಂದು ರಾಜ್ಯಾಧ್ಯಂತ ಮದ್ಯಪಾನ ಮಾರಾಟ ಹಾಗೂ ಸೇವನೆ ನಿಷೇಧಿಸಿ ಆದೇಶ ಹೊರಡಿಸಬೇಕೆಂದು, ನಗರ ಶಾಸಕರಾದ ಬಸನಗೌಡ.ರಾ.ಪಾಟೀಲ ಯತ್ನಾಳ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.
ಶಿಕ್ಷಣ ಪ್ರೇಮಿಗಳಾದ ಡಾ.ಬಿ.ಆರ್.ಅಂಬೇಡ್ಕರ್ ಅವರು, ತಮ್ಮ ಜೀವಿತಾವಧಿಯಲ್ಲಿ ದೇಶದಲ್ಲಿ ಬಡವರ, ದೀನ ದಲಿತರ, ಮಹಿಳೆಯರ ಒಳತಿಗಾಗಿ ಹಾಗೂ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆ, ದೇಶದ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ನಾಯಕರು. ಅವರ ಮಹಾನ್ ಕಾರ್ಯಕ್ಕೆ ಇಡೀ ಜಗತ್ತೆ ಮೆಚ್ಚಿಕೊಂಡಿದೆ.
ಇಂತಹ ಮಹಾನ್ ಪುರುಷನಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಆದ್ದರಿಂದ ಈ ನಾಯಕನ ಜನ್ಮ ದಿನವನ್ನು ಯಾವುದೇ ಅಹಿತಕರ ಚಟುವಟಿಕೆ ನಡೆಯದೆ, ಅತ್ಯಂತ ವಿಜೃಂಭಣೆ ಹಾಗೂ ವಿಶೇಷವಾಗಿ ಆಚರಿಸುವಂತಾಗಬೇಕು.
ಹೀಗಾಗಿ ಅವರ ಜನ್ಮ ದಿನವಾದ ಏಪ್ರಿಲ್ 14 ರಂದು ಪ್ರತಿ ವರ್ಷ ರಾಜ್ಯಾಧ್ಯಂತ ಮದ್ಯಪಾನ ಮಾರಾಟ ಹಾಗೂ ಸೇವನೆ ನಿಷೇಧಿಸುವ ಮೂಲಕ ಗೌರವ ಸಲ್ಲಿಸುವ ಜೊತೆಗೆ ದೇಶಕ್ಕೆ ನಮ್ಮ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ನಗರ ಶಾಸಕರು ಪತ್ರ ಬರೆದಿದ್ದಾರೆ ಎಂದು ನಗರ ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.