
ಕಲಬುರಗಿ:ಎ.5: ರಮಾಬಾಯಿ ಅಂಬೇಡ್ಕರ್ ಅವರು ತ್ಯಾಗಮಯಿ, ಸಮಾಜದಲ್ಲಿರುವ ಬಡವರು, ಶೋಷಿತರ, ಅನಾಥ ಮಕ್ಕಳ ಮಹಾತಾಯಿ. ‘ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುವುದು ಶಿವಂಗೆ’ ಎಂಬ ಮಾತಿನಂತೆ ತಮ್ಮ ಪತಿ ಡಾ.ಬಾಬಾಸಾಹೇಬ್ ಅಂಬೇಡ್ಕರ್‍ರ ದೇಶ ಕಟ್ಟುವ ಕಾರ್ಯದಲ್ಲಿ ಜೊತೆಗೂಡಿ ಕಾರ್ಯನಿರ್ವಹಿಸಿದವರು. ಹೀಗಾಗಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಲು ಸಾಧ್ಯವಾಯಿತು ಎಂದು ಜಿಲ್ಲಾ ಯುವಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು.
ನಗರದ ಜೆ.ಆರ್ ನಗರದಲ್ಲಿರುವ 'ಕೊಹಿನೂರ ಕಂಪ್ಯೂಟರ ತರಬೇತಿ ಮತ್ತು ಸ್ಪೋಕನ್ ಇಂಗ್ಲೀಷ್ ಅಕಾಡೆಮಿ'ಯಲ್ಲಿ ಕೇಂದ್ರ'ದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ' ಮತ್ತು ಡಾ.ಅಂಬೇಡ್ಕರ್ ಇಂಟಿಗ್ರೇಟೆಡ್ ರೀಸರ್ಚ್ ಇನ್ಸ್ಟಿಟ್ಯೂಟ್' ಇವುಗಳ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ 'ಮಾತೋಶ್ರಿ ರಮಾಬಾಯಿ ಮತ್ತು ಡಾ.ಬಾಬಾಸಾಹೇಬ್ ಅವರ 117ನೇ ಮದುವೆ ವಾರ್ಷಿಕೋತ್ಸವ' ಕಾರ್ಯಕ್ರಮದಲ್ಲಿ ಉಭಯರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಮಾತನಾಡಿ, ರಮಾಬಾಯಿ ಅಂಬೇಡ್ಕರ್‍ರು ಆರಂಭದಲ್ಲಿ ಅನಕ್ಷರಸ್ಥರಾಗಿದ್ದು, ಮದುವೆಯ ನಂತರ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ಅಕ್ಷರಸ್ಥರಾದರು. ಅನಕ್ಷರಸ್ಥರಾಗಿದ್ದಾಗ ತಮಗೆ ಆಗುತ್ತಿದ್ದ ತೊಂದರೆ, ಅನ್ಯಾಯವನ್ನು ಮನಗಂಡು, ನನ್ನಂತೆ ಬೇರೆ ಮಹಿಳೆಗೆ ಸಮಸ್ಯೆಯಾಗಬಾರದೆಂದು ತಮ್ಮ ಪತಿಯ ಜೊತೆಗೂಡಿ ಶೋಷಿತರ, ಮಹಿಳೆಯರ ಶಿಕ್ಷಣ, ಹಕ್ಕುಗಳನ್ನು ದೊರಕಿಸಿಕೊಡಲು ಹೋರಾಟ ಮಾಡಿದರು. ಹೀಗೆ ಪರಸ್ಪರ ಸತಿ-ಪತಿಗಳು ಸಹಕಾರದೊಂದಿಗೆ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸದಾ ಆದರ್ಶಪ್ರಾಯರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಸತೀಶ್ ಟಿ.ಸಣಮನಿ, ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಶಿವಯೋಗಪ್ಪ ಬಿರಾದಾರ, ಪ್ರೊ.ರಮೇಶ ಯಾಳಗಿ, ಅಭಯ ಪ್ರಕಾಶ, ದತ್ತು ಹಡಪದ, ಇಸ್ಮೈಲ್ ಅತ್ತರ್, ಸಾಯಿಪ್ರಸಾದ ಎಸ್.ಸಣಮನಿ, ಆಕಾಶ್ ಸೇರಿದಂತೆ ಇನ್ನಿತರರಿದ್ದರು.