ಡಾ. ಅಂಬೇಡ್ಕರರ ವ್ಯಕ್ತಿತ್ವ ಅನುಕರಣೀಯ


ಹುಬ್ಬಳ್ಳಿ,ಏ.2: ರಾಜಕೀಯ, ಧಾರ್ಮಿಕ, ಸಾಮಾಜಿಕ, ವಿಜ್ಞಾನ, ತತ್ವಜ್ಞಾನ ಎಲ್ಲ ಕ್ಷೇತ್ರಕ್ಕೂ ಡಾ. ಬಿ.ಆರ್.ಅಂಬೇಡ್ಕರ ಪ್ರೇರಣಾ ಬಿಂದುವಾಗಿದ್ದಾರೆ ಎಂದು ಆರ್ ಎಸ್ ಎಸ್ ಪ್ರಾಂತ ಸಹ ಸಂಘಚಾಲಕ ಹಾಗೂ ಲೋಕಹಿತ ಟ್ರಸ್ಟ್ ಅಧ್ಯಕ್ಷ ಅರವಿಂದರಾವ್ ದೇಶಪಾಂಡೆ ಹೇಳಿದರು.
ನಗರದ ಆರ್ ಎಸ್ ಎಸ್ ಕಚೇರಿ ಕೇಶವಕುಂಜ ಸಭಾಂಗಣದಲ್ಲಿ ಲೋಕಹಿತ ಟ್ರಸ್ಟ್ ಹಾಗೂ ಸಾಮರಸ್ಯ ವೇದಿಕೆಯಿಂದ ನಡೆದ ಡಾ. ಅಂಬೇಡ್ಕರ್ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರದ್ದು ಸವಾಲಿನ ಜೀವನ. ಅವರ ವಿದ್ವತ್, ನೇತೃತ್ವ ಕೌಶಲ್ಯ, ಸ್ವದೇಶಾಭಿಮಾನ, ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದ ಪರಿ ಹಾಗೂ ಅವರ ವ್ಯಕ್ತಿತ್ವ ಅನುಕರಣೀಯ ಎಂದು ಮಾಧವರಾವ್ ಗೋಳ್ಚಲಕರ್ ಹಾಗೂ ವಿನಾಯಕ ಸಾವರಕರ್ ಅಭಿಪ್ರಾಯಪಟ್ಟಿದ್ದರು. ಅಂಬೇಡ್ಕರ್ ವಿಚಾರಗಳು ಕೇವಲ ಭಾರತಕ್ಕಷ್ಟೆ ಅಲ್ಲ ವಿಶ್ವಕ್ಕೆ ವ್ಯಾಪ್ತವಾಗಿದೆ.
ಅಂಬೇಡ್ಕರ್ ಸದಾ ಅಸ್ಪರ್ಶ್ಯರ ಏಳಿಗೆ, ಹಿಂದೂ ಸಮಾಜದ ಸಾಮರಸ್ಯ ಕುರಿತು ಚಿಂತಿಸಿ ಅದಕ್ಕಾಗಿ ಶ್ರಮಿಸುತ್ತಿದ್ದರು. ಆದರೆ ಅವರನ್ನು ಕೇವಲ ಒಂದು ಜಾತಿಗೆ ಸೀಮಿತವಾಗಿದ್ದು ವಿಷಾದಕರ. ಅವರ ಆರ್ಥಿಕ, ಸಾಮಾಜಿಕ ನಿಲುವುಗಳು ಸಾರ್ವಕಾಲಿಕವಾಗಿವೆ. ಅವರ ಲೇಖನ, ವಿಚಾರಗಳಿಂದ ಅಂಬೇಡ್ಕರ್ ಸಮಾಜ ಪುರುಷ, ರಾಷ್ಟ್ರ ಪುರುಷರಾಗಿ ಬಿಂಬಿತರಾಗಿದ್ದಾರೆ.
ಅಂಬೇಡ್ಕರ ಅವರ ವಿಚಾರದ ಹಾದಿಯಲ್ಲೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಮಾನತೆಗೆ ಕಾರ್ಯನಿರ್ವಹಿಸುತ್ತಿದೆ. ಸರಸಂಘಚಾಲಕ ಮೋಹನ ಭಾಗವತ್ ಅವರು ಕೂಡ ನೀರು, ಮಂದಿರ ಪ್ರವೇಶ, ಸ್ಮಶಾನ ಎಲ್ಲರಿಗೂ ಮುಕ್ತವಾಗಬೇಕು ಎಂದು ಉಲ್ಲೇಖಿಸಿದ್ದಾರೆ. ಸಂಘದಲ್ಲಿ ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡುತ್ತಾರೆ ಆದರೆ ಒಬ್ಬರ ಜಾತಿ ಒಬ್ಬರಿಗೆ ತಿಳಿದಿಲ್ಲ ಮತ್ತು ಕೇಳುವುದೂ ಇಲ್ಲ. ಸಂಘದ ಗತಿವಿಧಿಯಾದ ಸಾಮರಸ್ಯ ವೇದಿಕೆಯೂ ಸಹ ಸಮಾನತೆಗೆ ಅನೇಕ ಕಾರ್ಯ ಕೈಗೊಳುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಸಾಬಣ್ಣ ತಳವಾರ, ಸಾಮರಸ್ಯ ಪ್ರಾಂತ ಸಂಯೋಜಕ ಶಿವಲಿಂಗ ಕುಂಬಾರ, ಶ್ರೀಧರ ನಾಡಗೀರ ಇತರರು ಪಾಲ್ಗೊಂಡಿದ್ದರು.