ಡಾಮಿನಿಕ್ ಥೀಮ್ ಗೆ ಚೊಚ್ಚಲ ಗ್ರ್ಯಾನ್ ಸ್ಲಾಮ್ ಕಿರೀಟ


ನ್ಯೂಯಾರ್ಕ್, ಸೆ. 14 -ಆಸ್ಟ್ರೀಯಾದ ಡಾಮಿನಿಕ್ ಥೀಮ್ ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಮಣಿಸಿ ಪ್ರಶಸ್ತಿ ಗೆಲ್ಲುವುದರೊಂದಿಗೆ ಚೊಚ್ಚಲ ಗ್ರ್ಯಾನ್ ಸ್ಲಾಮ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಥೀಮ್ 2-6, 4-6, 6-4, 6-3,7-6 (8-6) ಸೆಟ್ ಗಳಿಂದ ನಾಲ್ಕು ಗಂಟೆ 2 ನಿಮಿಷಗಳ ಹೋರಾಟದಲ್ಲಿ ಜ್ವೆರೆವ್ ಗೆ ಸೋಲುಣಿಸಿ ಪ್ರಶಸ್ತಿಗೆ ಭಾಜನರಾದರು. ಮೊದಲೆರಡು ಸೆಟ್ ಗಳಲ್ಲಿ ಹಿನ್ನೆಡ ಕಂಡರೂ ಛಲ ಬಿಡದ 27 ವರ್ಷ ಥೀಮ್ ಮೂರು ಮತ್ತು ನಾಲ್ಕನೇ ಸೆಟ್ ನಲ್ಲಿ ತಿರುಗೇಟು ನೀಡುವ ಮೂಲಕ ಸಬಲದ ಸಾಧಿಸಿದರು.
ಐದನೇ ಸೆಟ್ ಉಭಯ ಆಟಗಾರರ ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು. ಪ್ರತಿ ಗೇಮ್ ಗೂ ಇಬ್ಬರೂ ಹೋರಾಟ ನಡೆಸಿದ ಕಾರಣ ಸೆಟ್ ಟ್ರೈಬ್ರೇಕರ್ ಗೆ ಹೋಯಿತು. ಈ ಹಂತದಲ್ಲಿ ಕೌಶಲ್ಯಭರಿತ ಒತ್ತಡ ನಿರ್ವಹಣೆ ತೋರಿದ ಥೀಮ್ ಸೆಟ್ ಗೆದ್ದು ಚೊಚ್ಚಲ ಗ್ರ್ಯಾನ್ ಸ್ಲಾಮ್ ಕೀರಿಟಕ್ಕೆ ಮುತ್ತಿಟ್ಟರು. ಇದರೊಂದಿಗೆ 22 ಕೋಟಿ ರೂ. ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಂಡರು. ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ಜ್ವೆರೆವ್ 11 ಕೋಟಿ ರೂ.ಗಳನ್ನು ಜೇಬಿಗಳಿಸಿದರು.