ಡಾಂಬರೀಕರಣ ಕಾಮಗಾರಿ ಕಳಪೆ-ಆರೋಪ

ಬ್ಯಾಡಗಿ,ಏ21: ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿಗೆ ಕೂಡು ರಸ್ತೆಯಾಗಿ ಹಿರೇನಂದಿಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮಾಡಲಾದ ಡಾಂಬರೀಕರಣ ಕಾಮಗಾರಿಯು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಸಾರ್ವಜನಿಕರು ಮತ್ತು ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.

ಗ್ರಾಮಸ್ಥರಾದ ಚನಬಸಪ್ಪ ಮತ್ತೂರ ಮಾತನಾಡಿ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಂಬರೀಕರಣ ಕಾಮಗಾರಿಯನ್ನು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಕಳೆದ ಹದಿನೈದು ದಿನಗಳ ಹಿಂದೆ ಮಾಡಲಾಗಿದೆ. ಈ ಕಾಮಗಾರಿಯ ಗುಣಮಟ್ಟ ಹೇಗಿದೆ ಎಂದರೆ.. ಎತ್ತಿನಗಾಡಿ ಹೊಡೆದರೆ ತಗ್ಗು ಬೀಳುವಂತಾಗಿದ್ದು, ಸಮರ್ಪಕವಾಗಿ ಡಾಂಬರೀಕರಣವನ್ನು ಮಾಡದೆ ರಸ್ತೆ ತುಂಬೆಲ್ಲ ಉಬ್ಬು, ತಗ್ಗು ಮಾಡುವ ಮೂಲಕ ಕಾಟಾಚಾರಕ್ಕೆ ಡಾಂಬರೀಕರಣ ಕಾಮಗಾರಿಯನ್ನು ಮಾಡಲಾಗಿದೆ. ಅಲ್ಲದೇ ಕೈಯಿಂದಲೇ ರಸ್ತೆಯ ಮೇಲೆ ಹಾಕಿರುವ ಡಾಂಬರ್ ಕೀಳುವಂತಾಗಿದೆ ಎಂದು ಆರೋಪಿಸಿದರು.

ರೈತ ಸಂಘದ ಹಾಗೂ ಹಸಿರು ಸೇನೆ ತಾಲೂಕು ಕಾರ್ಯಾಧ್ಯಕ್ಷ ಕಿರಣ ಗಡಿಗೋಳ ಮಾತನಾಡಿ, ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಸಲು ಸಾರ್ವಜನಿಕರ ತೆರಿಗೆ ಹಣವನ್ನು ಬಳಕೆ ಮಾಡಲು ಸರ್ಕಾರ ಮುಂದಾಗಬೇಕು. ತೆರಿಗೆ ಹಣವನ್ನು ಸರಿಯಾಗಿ ಸದ್ಭಳಕೆ ಮಾಡದೇ ಕಳಪೆ ಕಾಮಗಾರಿಯನ್ನು ಮಾಡುವ ಮೂಲಕ ಹಾಳು ಮಾಡುತ್ತಿರುವುದು ಖಂಡನೀಯ, ಈ ರೀತಿ ಕಳಪೆ ಕಾಮಗಾರಿ ಮಾಡುವ ಮೂಲಕ ಸಾರ್ವಜನಿಕ ತೆರಿಗೆ ಹಣವು ವಿನಾಕಾರಣ ಹಾಳಾಗುತ್ತಿದ್ದು, ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿಯ ಬಿಲ್ ತಡೆ ಹಿಡಿದು, ಗುತ್ತಿಗೆದಾರರಿಗೆ ನೋಟಿಸ್ ಜಾರಿಗೊಳಿಸುವ ಮೂಲಕ ಮರು ಡಾಂಬರೀಕರಣ ಮಾಡಿಸಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದು ಅನಿವಾರ್ಯವೆಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಬಸವರಾಜ ದೊಡ್ಡಮನಿ, ಉಮೇಶ ಶಿವಪೂಜಿ, ಬಸನಗೌಡ ಪಾಟೀಲ, ಯುವರಾಜ ದೊಡ್ಡಮನಿ, ಕರಬಸಪ್ಪ ಕಬ್ಬೂರ, ಅಜ್ಜಪ್ಪ ಶಿವಪೂಜಿ, ಮಲ್ಲೇಶ ಮೂಲಿಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.