
ಮೈಸೂರು: ಮೇ.18:- ನಮ್ಮನ್ನೂ ಡಬಲ್ ಇಂಜಿನ್ ಸರ್ಕಾರ ಎಂದು ಕರೆಯುತ್ತಿದ್ದ ಕಾಂಗ್ರೆಸ್‍ನಲ್ಲಿ ಈಗ ಡಬಲ್ ಸ್ಟೇರಿಂಗ್ ಸರ್ಕಾರ ಬಂದೂ ಒಬ್ಬರೂ ಬಲಕ್ಕೆ ಮತ್ತೊಬ್ಬರೂ ಎಡಕ್ಕೆ ಎಳೆಯುತ್ತಿದ್ದಾರೆ ಎಲ್ಲಿಗೆ ಎಳೆಯುತ್ತಾರೆಂಬುದು ಗೊತ್ತಿಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ವ್ಯಂಗ್ಯವಾಡಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಡಬ್ಬಲ್ ಸ್ಟೇರಿಂಗ್ ಸರ್ಕಾರ ಒಳ್ಳೆಯ ಕೆಲಸ ಮಾಡಿದರೆ ಬೆನ್ನು ತಟ್ಟೋಣ. ಅವರ ಭಾಗ್ಯ ಏನು ಮಾಡುತ್ತೋ ಏನೋ ಗೊತ್ತಿಲ್ಲ. ವರುಣ ಕ್ಷೇತ್ರವನ್ನು ಸಿದ್ದರಾಮಯ್ಯ ಸಾಹೇಬರು ವರ್ಣರಂಜಿತವಾಗಿ ಮಾಡಬೇಕು ಎಂದುಕೊಂಡಿದ್ದಾರೆ. ಏನು ಮಾಡ್ತಾರೋ ನೋಡೋಣ. ನನ್ನ ಹೈಕಮಾಂಡ್ ಹೇಳಿದ್ದಕ್ಕೆ ನಾನು ಇಲ್ಲಿಗೆ ಬಂದೆ. ಯಾರು ನನ್ನ ಸೋಲಿಗೆ ಕಾರಣರಾದವರು ಎಂದು ನಾನು ಈಗ ಹೇಳುವುದಿಲ್ಲ. ಇಂದಲ್ಲಾ ನಾಳೆ ಪಾಪ ಮಾಡಿದವನು ಹೊರಗೆ ಬರುತ್ತಾನೆ. ಆದಾಗ್ಯೂ ಮಾತನಾಡುವುದಾದರೆ ಲೋಕಸಭಾ ಚುನಾವಣೆಯ ಬಳಿಕ ಮತ್ತೆ ಬರುತ್ತೇನೆಂದು ಹೇಳಿದರು.
ನಾನು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ. ನಾನು ಯಾವ ಎಂಎಲ್‍ಸಿ ಸ್ಥಾನಕ್ಕೂ, ಮತ್ಯಾವುದಕ್ಕೂ ಆಸೆ ಪಟ್ಟವನಲ್ಲ, ಆಸೆ ಪಡುವುದೂ ಇಲ್ಲ.
ನಾನು ಅನಿರೀಕ್ಷಿತವಾಗಿ ವರುಣಕ್ಕೆ ಬಂದವನು. ಪಕ್ಷ ಇಲ್ಲಿಗೆ ಹೋಗಿ ನಿಲ್ಲಲು ಹೇಳಿತು. ನನ್ನ ಕ್ಷೇತ್ರ ಗೋವಿಂದರಾಜನಗರವಾಗಿದ್ದು, ರಾಜ್ಯದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದಿರುವ ಕ್ಷೇತ್ರ ಗೋವಿಂದರಾಜನಗರ ಕ್ಷೇತ್ರವಾಗಿದೆ. ಪಕ್ಷದ ನಾಯಕರು ಹೇಳಿದ್ದಕ್ಕೆ ನಾನು ಹಿಂದೆ ತಿರುಗಿ ನೋಡದೇ ಇಲ್ಲಿಗೆ ಬಂದೆ. ಮೈಸೂರು-ಚಾಮರಾಜನಗರ ಜಿಲ್ಲೆಗಳು ನನಗೆ ಎರಡು ಕಣ್ಣುಗಳು ಇದ್ದ ಹಾಗೆಯೇ, ಮಲೆ ಮಹದೇಶ್ವರ ನಮ್ಮ ಮನೆ ದೇವರಾಗಿದ್ದಾರೆ. ಚಾಮುಂಡೇಶ್ವರಿ ನಾನು ನಂಬಿರುವ ದೇವರು, 2019ರ ದಸರಾವನ್ನು ಚೆನ್ನಾಗಿ ಮಾಡಲು ನನ್ನ ಅಳಿಲು ಸೇವೆಯೂ ಇದೆ ಎಂದರು.
ಕೊರೊನಾ ಕಾಲದಲ್ಲಿ ಅನಿಲ ವಿತರಣೆಯಲ್ಲಿ ಕ್ರಮವಹಿಸಿ ಮೈಸೂರಿನಲ್ಲಿ ಒಂದಷ್ಟು ಒಳ್ಳೆಯ ಕೆಲಸ ಮಾಡಿದ್ದೇನೆ. ಇದೆಲ್ಲವನ್ನೂ ನೋಡಿ ನಮ್ಮ ವರಿಷ್ಠರು ವರುಣಕ್ಕೆ ಹೋಗಲು ಹೇಳಿದರು. ಚಾಮರಾಜನಗರಕ್ಕೂ ಹೋಗುವಂತೆ ನನಗೆ ವರಿಷ್ಠರು ಹೇಳಿದರು. ಮೋದಿ ಅವರು ಇನ್ನೂ 10ವರ್ಷ ಪ್ರಧಾನಿಯಾಗಬೇಕು ಎಂದು ಇಡೀ ವಿಶ್ವವೇ ಹೇಳುತ್ತಾ ಇದೆ. ಈ ಹೊತ್ತಿನಲ್ಲಿ ನಾವು ಸಂದಿಗ್ದ ಪರಿಸ್ಥಿತಿಯಲ್ಲಿ ನಿಂತಿದ್ದೇವೆ. ವರುಣ ಕ್ಷೇತ್ರದಲ್ಲಿ ಎಲ್ಲಾ ಮುಖಂಡರು ಕಾರ್ಯಕರ್ತರು ಬೆಂಬಲ ನೀಡಿದ್ದೀರಾ. ಸಿದ್ದರಾಮಯ್ಯ ಸಿನಿಮಾ ತಾರೆಗಳನ್ನು ಕರೆತಂದು ಪ್ರಚಾರ ಮಾಡಿದರು. ಇದಕ್ಕೆ ಬಿಜೆಪಿ ಕಾರ್ಯಕರ್ತರ ದುಡಿತ ಕಾರಣ. ನನ್ನ ಸೋಲಿಗೆ ಎರಡು, ಮೂರನೇ ಹಂತದ ನಾಯಕರು ಕಾರಣವಲ್ಲ. ಅದಕ್ಕೂ ಮೇಲಿನವರು ಏನು ಮಾಡಿದ್ದಾರೆ ಎಂದು ಅವರಿಗೇ ಗೊತ್ತು. ಇದಕ್ಕೆ ಬೇರೆ ಯಾರು ಕಾರಣ ಅಲ್ಲ. ನನ್ನ ಜೀವನದಲ್ಲಿ ವರುಣದಲ್ಲಿ ಗೆದ್ದರೆ ನನ್ನ ಮಕ್ಕಳಿಗೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಚಾಮುಂಡೇಶ್ವರಿ ತಾಯಿಯೇ ಆ ಅಪಪ್ರಚಾರವನ್ನು ನೋಡಿಕೊಳ್ಳುತ್ತಾಳೆ ಎಂದರು.
ಎಲ್ಲಾ ಸಮಾಜವನ್ನು ಚೆನ್ನಾಗಿ ನೋಡಿಕೊಳ್ಳದೇ ಇದ್ದರೆ ಹೇಗೆ ಟಕ್ಕರ್ ನೀಡುತ್ತಾರೆಂಬುದಕ್ಕೆ ವರುಣ ಕ್ಷೇತ್ರವೇ ಸಾಕ್ಷಿ. ಮುಂದೆ ಯಾವ ಸಮಾಜದ ಜನಕ್ಕೂ ವ್ಯತ್ಯಾಸ ಆಗುವುದಿಲ್ಲ. ಕಾಂಗ್ರೆಸ್ ನೀಡಿರುವ ಭರವಸೆ ಉಲ್ಟಾ ಆಗುತ್ತಿದೆ. ಆರು ತಿಂಗಳು ಎಲ್ಲರೂ ತಡೆದುಕೊಂಡು ಇರಿ. ಈ ಡಬ್ಬಲ್ ಸ್ಟೇರಿಂಗ್ ಸರ್ಕಾರ ಎಲ್ಲಿ ಬಿದ್ದು ಹೋಗುತ್ತೇ ಎನ್ನೋದು ಗೊತ್ತಿಲ್ಲ. ರಾಜಕೀಯ ನಿಂತ ನೀರಲ್ಲ, ಸದಾ ಹರಿಯುವ ನೀರಾಗಿದೆ. ನಾನು ದೇವೇಗೌಡರ ಗರಡಿಯಲ್ಲಿ ಬೆಳೆದಿದ್ದೇನೆ. ಜೆ.ಹೆಚ್.ಪಟೇಲ್ ಅವರ ಜೊತೆಯಲ್ಲಿ ಬೆಳೆದವನು. ಬಿಜೆಪಿಗೆ ಬಂದಾಗ ಯಡಿಯೂರಪ್ಪ ಅವರು ಏನೆಲ್ಲಾ ಕೆಲಸ ಮಾಡಬೇಕೆಂದು ಹೇಳಿಕೊಟ್ಟರೆಂದು ಸ್ಮರಿಸಿಕೊಂಡರು.
ನನಗೆ ಪಕ್ಷವೇ ದೇವರು, ಪಕ್ಷವೇ ತಾಯಿ. ನನಗೆ ತಿಕ್ಕಲು ಹತ್ತಿದ್ದರೆ ಪಕ್ಷವೂ ಬೇಡಾ ಎಂದು ಹೋಗುತ್ತಾ ಇರುತ್ತೇನೆ. ಎಸ್.ಎಂ.ಕೃಷ್ಣ ಅವರ ವಿರುದ್ಧ ಜಗಳವಾಡಿಕೊಂಡು ಪಕ್ಷೇತರನಾಗಿ ನಿಂತುಕೊಂಡು ಗೆದ್ದಿದ್ದೇನೆ. ನಾನು ಯಾವತ್ತೂ ನನ್ನ ಮಕ್ಕಳನ್ನು ರಾಜಕೀಯಕ್ಕೆ ತರಬೇಕು ಎಂದುಕೊಂಡವನಲ್ಲ. ನಾನು ತಪ್ಪು ಮಾಡಿದ್ದರೆ ನಾನು ಒಪ್ಪಿಕೊಳ್ಳುತ್ತೇನೆ. ನನಗಿಂತ ದೊಡ್ಡವನು ತಪ್ಪು ಮಾಡಿದ್ದರೂ, ಅದು ನೀನೇ ಎಂದು ನಾನು ಹೇಳ್ತೀನಿ. ವರುಣದಲ್ಲಿ ಯಾರಿಗಾದರೂ ತೊಂದರೆ ಕೊಟ್ಟರೆ ಸೋಮಣ್ಣ ಇದ್ದಾನೆ. ಬೆಂಗಳೂರಿನಲ್ಲಿ ನನ್ನೇದೆ ಆದ ಕೋಟೆ ಕಟ್ಟಿದ್ದೇನೆ. ನಾನು ನನ್ನ ದುಡಿಮೆಯಲ್ಲಿ ಬೆಳೆದಿದ್ದೇನೆ. ಯಾಕೆ ನನ್ನ ಇಲ್ಲಿಗೆ ಕರೆಸಿದರೋ ಗೊತ್ತಿಲ್ಲ. ಚಿನ್ನದಂತ ನನ್ನ ಕ್ಷೇತ್ರದ ಜನ ಬೀದಿಯಲ್ಲಿ ಅನಾಥರಾಗಿ ಕಣ್ಣೀರು ಸುರಿಸುತ್ತಿದ್ದಾರೆ. ಅಂಗವಿಕಲರಿಗೆ ಮಾಡಿದ್ದ ಜಿಮ್‍ಗೆ ಬೀಗ ಹಾಕಿದ್ದಾರೆಂದರು.
ಸಿದ್ದರಾಮಯ್ಯ ಅವರ ಇಡೀ ಜೀವನದಲ್ಲಿ ಖರ್ಚು ಮಾಡಿದ್ದನ್ನು ಈ ಬಾರಿಯ ಚುನಾವಣೆಯಲ್ಲಿ ಖರ್ಚು ಮಾಡಿದ್ದಾರೆ. ಸಿದ್ದರಾಮಯ್ಯಗೆ ಯಾರು ಯಾರು ಫಂಡ್ ಮಾಡಿದ್ದಾರೆ ಎಂದು ಗೊತ್ತು. ನಾನು ದಡ್ಡನಲ್ಲ, ದಡ್ಡನ ತರಹ ನಡೆದುಕೊಳ್ಳುವ ಬುದ್ಧಿವಂತನಿದ್ದೇನೆ. ಮೈಸೂರಿನಲ್ಲಿ ನನ್ನ ಹಾಗೆಯೇ ಮಾತಾಡೋರು ಕಡಿಮೆ. ಜೋರಾಗಿ ಮಾತಾಡೋರನ್ನು ಬಾಯಿ ಮುಚ್ಚಿಸುತ್ತಾರೆ. ಇನ್ನೊಮ್ಮೆ ಈ ರೀತಿಯ ಅವಕಾಶ ಚೆಲ್ಲಬೇಡಿ. ಎಲ್ಲರೂ ಪಕ್ಷ ಕಟ್ಟಿ, ಪಕ್ಷ ಹೇಳಿದ ಮಾತು ಕೇಳಿ. ಅವಶ್ಯಕತೆ ಇದ್ದವರಿಗೆ ಜಾತಿ ನೋಡದೇ, ಯಾರ ಫಾಲೋಹರ್ ಎಂದು ನೋಡದೇ ಗುರುತಿಸಿ. ಇಲ್ಲಿ ಯಾರ್ ಯಾರ್ ವಾಟ್ಸ್ ಆ?ಯಫ್ ಮಾಡ್ತಾರೆ ಗೊತ್ತಿಲ್ಲ. ಎಲೆಕ್ಟ್ರಾನಿಕ್ ಯುಗದಲ್ಲಿ ಹುಷಾರಾಗಿರಬೇಕು ಎಂದು ಎಚ್ಚರಿಸಿದರು.
ಸಭೆಯಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ, ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ಮೈ.ವಿ.ರವಿಶಂಕರ್, ಎಸ್.ಮಹದೇವಯ್ಯ, ಕೋಟೆ ಎಂ.ಶಿವಣ್ಣ, ಕಲ್ಮಳ್ಳಿ ವಿಜಯಕುಮಾರ್, ಜಿಪಂ ಮಾಜಿ ಸದಸ್ಯ ಸದಾನಂದ್, ದೇವನೂರು ಚೇತನ್ ಇನ್ನಿತರರು ಭಾಗವಹಿಸಿದ್ದರು.