ಡಬಲ್ ಎಂಜಿನ್ ಸರಕಾರ ಸಮಗ್ರ ಪ್ರಗತಿಗೆ ಬದ್ಧ : ಪ್ರಧಾನಿ ಮೋದಿ

ಧಾರವಾಡ ಮಾ.12: ಉತ್ತಮ ಶಿಕ್ಷಣವು ಪ್ರತಿಯೊಬ್ಬರಿಗೆ ದೊರಕಬೇಕಿದೆ. ಆದ್ದರಿಂದ ಉತ್ತಮ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಸರಕಾರ ಆದ್ಯತೆ ನೀಡಿದೆ. ದೇಶದಲ್ಲಿ ಕಳೆದ 9 ವರ್ಷಗಳಿಂದ ಆಧುನೀಕರಣಕ್ಕೆ ಒತ್ತು ನೀಡಲಾಗಿದೆ. ಗ್ರಾಮೀಣ ರಸ್ತೆ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ರೈಲು ಮಾರ್ಗಗಳ ವಿಸ್ತರಣೆ ಹಾಗೂ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಇಲ್ಲಿನ ಚಿಕ್ಕಮಲ್ಲಿಗವಾಡದಲ್ಲಿ ನಿರ್ಮಾಣವಾಗಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ನೂತನ ಕಟ್ಟಡ ಉದ್ಘಾಟಿಸಿ, ವಿವಿಧ ಯೋಜನೆಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.

ಡಬಲ್ ಎಂಜಿನ್ ಸರಕಾರವು ರಾಜ್ಯದ ಹಳ್ಳಿ ಹಳ್ಳಿಗಳ ಸಮಗ್ರ ಪ್ರಗತಿಗೆ ಬದ್ಧವಾಗಿದೆ. ಐಐಟಿಯ ಹೊಸ ಕ್ಯಾಂಪಸ್ ಧಾರವಾಡದ ಪರಿಚಯವನ್ನು ಮತ್ತಷ್ಟು ಬಲಗೊಳಿಸಲಿದೆ. ಕರ್ನಾಟಕದ ವಿಕಾಸದಲ್ಲಿ ಐಐಟಿ ಹೊಸ ಅಧ್ಯಾಯವಾಗಲಿದೆ. ಇಲ್ಲಿನ ಮೂಲ ಸೌಕರ್ಯಗಳು ಈ ಸಂಸ್ಥೆಯನ್ನು ವಿಶ್ವದ ಮುನ್ನೆಲೆಗೆ ತರಲಿದೆ ಎಂದರು.

ದೇಶದಲ್ಲಿ ಕೇವಲ 380 ವೈದ್ಯಕೀಯ ಕಾಲೇಜುಗಳಿದ್ದವು 9 ವರ್ಷಗಳಲ್ಲಿ 250 ಕಾಲೇಜು ಸ್ಥಾಪಿಸಲಾಗಿದೆ. ಇದೇ ರೀತಿ ಐಐಟಿ ಗಳನ್ನು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆರಂಭಿಸಲಾಗಿದೆ ಎಂದರು.

ಜಲಜೀವನ್ ಮಿಷನ್ ಯೋಜನೆ ಮೂಲಕ 1 ಸಾವಿರ ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಮಲಪ್ರಭಾ ನದಿಯ ನೀರನ್ನು ನಳಗಳ ಮೂಲಕ ಮನೆ ಮನೆಗೆ ತಲುಪಿಸಲಾಗುವುದು.
ತುಪ್ಪರಿಹಳ್ಳದ ಯೋಜನೆ ಮೂಲಕ ಪ್ರವಾಹ ಹಾನಿ ತಪ್ಪಿಸಲಿದೆ ಎಂದರು.

ರೈಲು ಮಾರ್ಗದ ವಿದ್ಯುದ್ದೀಕರಣದಿಂದ ತೈಲದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಪರಿಸರ ರಕ್ಷಣೆಗೂ ಸಹಕಾರಿಯಾಗಲಿದೆ ಎಂದರು.

ರಸ್ತೆ, ಸಾರಿಗೆ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸುವುದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತಿದೆ. ಹಳ್ಳಿ ಹಳ್ಳಿಗೆ ಅಂತರ್ಜಾಲ ಸಂಪರ್ಕವನ್ನು ಒದಗಿಸಿರುವುದರಿಂದ ಇಂದು ಭಾರತವು ಜಗತ್ತಿನ ಡಿಜಿಟಲ್ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ.
ಪಿಎಂ -ಗತಿಶಕ್ತಿ ಮಾಸ್ಟರ್ ಪ್ಲ್ಯಾನ್ ಮೂಲಕ ಅಗತ್ಯ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಆಸ್ಪತ್ರೆ, ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಭವಿಷ್ಯದ ಭಾರತ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ.

ಕರ್ನಾಟಕವು ಹೈಟೆಕ್ ಇಂಡಿಯಾದ ಎಂಜಿನ್ ಆಗಿದೆ ಎಂದು ಬಣ್ಣಿಸಿದ ಅವರು, ಡಬಲ್ ಎಂಜಿನ್ ಸರಕಾರಕ್ಕೆ ಇಲ್ಲಿನ ಜನರ ಆಶೀರ್ವಾದ ಬಲ ತುಂಬಲಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜಕಾರಣಿಗಳ ಕಣ್ಣು ಮುಂದಿನ ಚುನಾವಣೆಗಳ ಮೇಲಿದ್ದರೆ, ಮುತ್ಸದ್ಧಿಯ ಕಣ್ಣು ಮುಂದಿನ ಪೀಳಿಗೆಯ ಭವಿಷ್ಯದ ಮೇಲಿರುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಂತಹ ಮುತ್ಸದ್ಧಿತನ ಹೊಂದಿರುವ ನೇತಾರ ತಾಂತ್ರಿಕವಾಗಿ ದೇಶವನ್ನು ಸಶಕ್ತಗೊಳಿಸಲು ಧಾರವಾಡ ಐಐಟಿ ಸ್ಥಾಪಿಸಿದ್ದಾರೆ. ಹೊಸಪೇಟೆ -ಹುಬ್ಬಳ್ಳಿ- ತಿನೈಘಾಟ್ ರೈಲ್ವೇ ಮಾರ್ಗದ ವಿದ್ಯುದ್ದೀಕರಣ ಸೇರಿದಂತೆ ಅನೇಕ ಸುಧಾರಣೆಗಳನ್ನು ತಂದಿದ್ದಾರೆ. ಪ್ರಸಕ್ತ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೇ ಸುಧಾರಣೆಗೆ 7651 ಕೋಟಿ ಮೀಸಲಿಟ್ಟಿರುವ ಡಬಲ್ ಇಂಜಿನ್ ಸರ್ಕಾರ ಇದಾಗಿದೆ. ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 13 ಲಕ್ಷ ಕೆಲಸಗಳಂತೆ ಕಳೆದ ಐದು ವರ್ಷಗಳಲ್ಲಿ ಸುಮಾರು 33 ಲಕ್ಷ ಉದ್ಯೋಗ ಸೃಜನೆ ಮಾಡಿರುವದರ ಹಿಂದೆ ಕೇಂದ್ರ ಸರ್ಕಾರದ ಶಕ್ತಿ ಇದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡಿದೆ. ಶಿಕ್ಷಣ,ಮೂಲಭೂತ ಸೌಕರ್ಯ, ಕೈಗಾರೀಕರಣದಂತಹ ಮಹತ್ವದ ಕಾರ್ಯಗಳು ರಾಜ್ಯ ಮತ್ತು ಕೇಂದ್ರದಲ್ಲಿ ಏಕಕಾಲದಲ್ಲಿ ನಡೆಯುತ್ತಿವೆ ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ ಮಾತನಾಡಿ, ಘೋಷಣೆಗೆ ಸೀಮಿತವಾಗಿದ್ದ ಬಡತನ ನಿವಾರಣೆ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ, ಮಹಿಳೆಯರು, ಮಕ್ಕಳನ್ನು ಸಶಕ್ತಗೊಳಿಸಿ, ಜಗತ್ತಿಗೆ ಭಾರತವನ್ನು ಹಿರಿಯಣ್ಣನಾಗಿ ರೂಪಿಸುತ್ತಿರುವ ಶ್ರೇಯಸ್ಸು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಹೊಸ ಯೋಜನೆಗಳನ್ನು ಪ್ರಧಾನಿಯವರು ದೇಶಕ್ಕೆ ನೀಡಿದ್ದಾರೆ. ಧಾರವಾಡಕ್ಕೆ ಪ್ರತಿಷ್ಠಿತ ಐಐಟಿ ಬರಲು ಅವರು ಕಾರಣರಾಗಿದ್ದಾರೆ. 2019 ರಲ್ಲಿ ಈ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ್ದ ಪ್ರಧಾನಿಯವರೇ ಈ ಕಟ್ಟಡ ಉದ್ಘಾಟಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಹುಬ್ಬಳ್ಳಿಯ ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢರ ಹಾಗೂ ಬೆಂಗಳೂರಿನ ರೈಲು ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಹೆಸರಿಟ್ಟ ಶ್ರೇಯಸ್ಸು ಪ್ರಧಾನಿಯವರದ್ದಾಗಿದೆ ಎಂದರು.

ಸನ್ಮಾನ: ಹಾವೇರಿಯ ಏಲಕ್ಕಿ ಹಾರ, ಮುತ್ತಿನಿಂದ ಅಲಂಕರಿಸಿದ ಪೇಟ, ಶಾಲು ಹೊದಿಸಿ,ಶ್ರೀ ಸಿದ್ಧಾರೂಢರ ವಿಗ್ರಹ, ಕಲಘಟಗಿಯ ಆಕರ್ಷಕ ತೊಟ್ಟಿಲು ಹಾಗೂ ಧಾರವಾಡ ಪೇಡಾ ನೀಡಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸತ್ಕರಿಸಲಾಯಿತು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ, ವಿ.ಸೋಮಣ್ಣ, ಬಿ.ಎ.ಬಸವರಾಜ, ಶಂಕರ ಪಾಟೀಲ ಮುನೇನಕೊಪ್ಪ, ಮಾಜಿಮುಖ್ಯಮಂತ್ರಿ-ಶಾಸಕ ಜಗದೀಶ್ ಶೆಟ್ಟರ್, ಶಾಸಕರಾದ ಸಿ.ಎಂ.ನಿಂಬಣ್ಣವರ, ಅರವಿಂದ ಬೆಲ್ಲದ, ಅಮೃತ ದೇಸಾಯಿ, ವಿಧಾನಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಎಸ್.ವಿ.ಸಂಕನೂರ, ಮಹಾನಗರಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.