ಡಬಲ್ ಇಂಜಿನ್ ಸರ್ಕಾರದ ಮುಂದೆ ಯಾವುದೂ ನಡೆಯಲ್ಲ: ಬಿ.ವೈ.ವಿಜಯೇಂದ್ರ ಗುಡುಗು

ಚಾಮರಾಜನಗರ, ಮಾ.25- ಡಬಲ್ ಇಂಜಿನ್ ಸರ್ಕಾರದ ಮುಂದೆ ಸರ್ಕಾರದ ಮುಂದೆ ಯಾವುದೂ ನಡೆಯಲ್ಲ ಎಂದು ಬಿಜೆಪಿ ಯುವ ನಾಯಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಗುಡುಗಿದರು.
ಅವರು, ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ವತಿಯಿಂದ ಯುವ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದೆ. ದೇಶದಲ್ಲಿ ಈಗಾಗಲೇ ಜನರು ಕಾಂಗ್ರೆಸ್ ಕಿತ್ತು ಬಿಸಾಕುತಿದ್ದಾರೆ. ಆದರೆ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು ಎಂದು ಗ್ಯಾರಂಟಿ ಕಾರ್ಡ್ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಜೆಡಿಎಸ್ ಅತಂತ್ರದ ಮೂಲಕ ಅಧಿಕಾರ ಹಿಡಿಯಬೇಕು ಎಂದು ಕಾದು ಕುಳಿತಿದೆ. ಆದರೆ ಡಬಲ್ ಇಂಜಿನ್ ಸರ್ಕಾರದ ಮುಂದೆ ಯಾವುದು ನಡೆಯುವುದಿಲ್ಲ. ಚಾಮರಾಜನಗರದ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷ ಅಧಿಕಾರ ಹಿಡಿಯಲಿದೆ. ಇದನ್ನು ತಡೆಯಲುಯಾರಿಂದಲೂ ಸಾಧ್ಯವಿಲ್ಲ ಎಂದು ಬಿ.ವೈ ವಿಜಯೇಂದ್ರ ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ನಮ್ಮ ಮನೆಯಲ್ಲಿ ಉಪಹಾರ ಸೇವಿಸಿ ಮುಂದಿನ ದಿನದಲ್ಲಿ ಯಾವ ರೀತಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂಬ ಚರ್ಚೆ ಮಾಡಿದ್ದಾರೆ. ಇದರಿಂದ ಮತ್ತಷ್ಟು ಬಲ ಬಂದಿದೆ. ಇಲ್ಲಿನ ಬಿಜೆಪಿ ಕಾರ್ಯಕರ್ತರನ್ನು ನೋಡಿದರೆ ನಾನೇಕೆ ಇಲ್ಲೆ ಬಂದು ಚುನಾವಣೆಯಲ್ಲಿ ನಿಲ್ಲಬಾದರು ಎಂದು ನನಗೆ ಹೊಟ್ಟೆ ಹುರಿಯುತ್ತದೆ. ಇಂತಹ ಕಾರ್ಯಕರ್ತರನ್ನ ಪಡೆದ ನೀವೇ ಧನ್ಯರು. ರಣೋತ್ಸಾಹ ಬರುವ ರೀತಿಯಲ್ಲಿ ಜನ ಸೇರಿದ್ದೀರಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಬಿ.ಎಸ್.ಯಡಿಯೂರಪ್ಪ ಅವರಿಗೆರಾಘವೇಂದ್ರ ಮತ್ತು ವಿಜಯೇಂದ್ರ ಒಂದು ಕಣ್ಣಾದರೆ, ಶಾಸಕ ಸಿ.ಎಸ್.ನಿರಂಜನಕುಮಾರ್ ಮತ್ತೊಂದು ಕಣ್ಣು. ಆದ್ದರಿಂದ 50 ಸಾವಿರ ಮತಗಳ ಅಂತರದಿಂದ ನಿರಂಜನಕುಮಾರ್ ಗೆದ್ದು ಬಂದರೆ ಯಡಿಯೂರಪ್ಪ ಅವರನ್ನೇ ಗೆಲ್ಲಿಸಿದಂತೆ. ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡುವ ರೀತಿ ನೋಡಿದರೆ ನಮಗೆ ನಾಚಿಕೆ ಆಗುತ್ತದೆ ಎಂದು ಅಮಿತ್ ಶಾ ಹೇಳುತ್ತಾರೆ. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ 140 ಸೀಟ್ ಗೆಲ್ಲಿಸಿ ಅಧಿಕಾರಕ್ಕೆ ಹಿಡಿಬೇಕು ಎಂದು ಕರೆ ನೀಡಿದರು.
ರಾಗಾ ಅನರ್ಹ, ಮಾಡಿದುಣ್ಣೋ ಮಹರಾಯ :ಮಾಡಿದೊಣ್ಣೋ ಮಹಾರಾಯ ಎಂಬಂತೆ ರಾಹುಲ್ ಗಾಂಧಿಗಾಗಿದೆ ಎಂದು ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ರಾಗಾ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಕ್ಕೆ ಪ್ರತಿಕ್ರಿಯಿಸಿದರು.
ಮೋದಿ ಆಡಳಿತವನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿರುವಾಗ ರಾಹುಲ್ ಗಾಂಧಿ ಆ ರೀತಿ ಮಾತನಾಡಿದ್ದು ಸರಿಯಲ್ಲ, ನ್ಯಾಯಾಲಯ ಸರಿಯಾದ ಕ್ರಮ ತೆಗೆದುಕೊಂಡಿದೆ ಎಂದು ಅಭಿಪ್ರಾಯಪಟ್ಟರು.
ಸಿದ್ದುಗೇ ಕಾಂಗ್ರೆಸ್‍ನಿಂದಲೇ ಖೆಡ್ಡಾ:
ಇನ್ನೂ, ಸಿದ್ದರಾಮಯ್ಯ ಅವರ ಕ್ಷೇತ್ರ ಕಗ್ಗಂಟಾಗಿರುವ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಂಗ್ರೆಸ್ ಪಕ್ಷದ ಮುಖಂಡರೇ ಖೆಡ್ಡಾ ತೋಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಗೆಲ್ಲಿಸಬಾರದು ಎಂದು ಒಳಗೊಳಗೆ ಬೇಗುದಿ ಬೇಯ್ಯುತ್ತಿದೆ. ಒಬ್ಬರನ್ನು ಕಂಡರೇ ಮತ್ತೊಬ್ಬರಿಗೆ ಆಗದ ಪರಿಸ್ಥಿತಿ ಕಾಂಗ್ರೆಸ್‍ನಲ್ಲಿದ್ದು,ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಂಗ್ರೆಸ್ ಮುಖಂಡರೇ ಮಾಸ್ಟರ್ ಪ್ಲಾನ್ ಮಾಡಿದ್ದಾರೆ, ಕಾಂಗ್ರೆಸ್‍ನ ಒಳಜಗಳದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಭಿವೃದ್ಧಿಪರ್ವಕ್ಕೆ ಜನ ಆಶೀರ್ವಾದ ಮಾಡುತ್ತಾರೆ, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ತಮ್ಮ ಸ್ಪರ್ಧೆ ಬಗ್ಗೆ ಮಾತನಾಡಿ, ನಾನು ಈಗಾಗಲೇ ಶಿಕಾರಿಪುರದಲ್ಲಿ ಎರಡು ಸುತ್ತಿನ ಪ್ರವಾಸ ಶುರು ಮಾಡುತ್ತಿದ್ದೇನೆ, ವರುಣದಲ್ಲಿ ಸ್ಪರ್ಧೆ ಕುರಿತು ಚರ್ಚೆ ನಡೆದಿಲ್ಲ, ಎಲ್ಲರ ನಾಯಕತ್ವದಲ್ಲಿ ಚುನಾವಣೆ ನಡೆಯಲಿದ್ದು ಕಾರ್ಯಕರ್ತರಿಗೆ ಬಲ ತುಂಬುವ ಕೆಲಸ ಮಾಡುತ್ತೇನೆ ಎಂದರು.
ಇದಕ್ಕೂ ಮೊದಲು ಕಾರ್ಯಕ್ರಮದ ಆರಂಭದಲ್ಲಿ ಸುರಪುರ ಶಾಸಕ ರಾಜುಗೌಡ ಮಾತನಾಡಿ, ಯಡಿಯೂರಪ್ಪ ರಾಜಾಹುಲಿ ಆದರೆ ವಿಜಯೇಂದ್ರ ಮರಿ ಹುಲಿ ಅಲ್ಲ, ವಿಜಯೇಂದ್ರ ಹೆಬ್ಬುಲಿ ಇದ್ದಂತೆ. ರಾಜ್ಯ ರಾಜಕಾರಣದಲ್ಲಿ ವಿಜಯೇಂದ್ರ ಹೊಸ ಬದಲಾವಣೆ ತರುತ್ತಿದ್ದಾರೆ ಎಂದರು.
ಯಡಿಯೂರಪ್ಪ 2.0:
ರಘು ಕೌಟಿಲ್ಯ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಯಡಿಯೂರಪ್ಪ 2.0 ಆರಂಭವಾಗಲಿದೆ ಎನ್ನುವ ಮೂಲಕ ವಿಜಯೇಂದ್ರಗೆ ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ಸೂಚ್ಯವಾಗಿ ತಿಳಿಸಿದರು.
ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಮಾತನಾಡಿ, ಬಿಜೆಪಿ ಕೇವಲ ಲಿಂಗಾಯತರ ಪಕ್ಷ ಎನ್ನುತ್ತಿದ್ದರು. ಆದರೆ ಎಸ್ಸಿ, ಎಸ್ಟಿ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಹೆಚ್ಚಳ ಮಾಡುವ ಮೂಲಕ ದೀನ ದಲಿತರು, ಹಿಂದುಳಿದ ವರ್ಗದವರ ಪರ ನಿಂತಿದೆ. ಆದ್ದರಿಂದ ನಾಯಕ ಸಮುದಾಯ ನರೇಂದ್ರ ಮೋದಿ, ಯಡಿಯೂರಪ್ಪ ಸರ್ಕಾರವನ್ನು ಜೀವನ ಇರೋವರೆಗೂ ಮರೆಯಬಾರದು. ಇದನ್ನು ಯುವಕರು, ಮನೆ ಮನೆಗೆ ಹೋಗಿ ತಿಳಿ ಹೇಳಬೇಕು. ಸರಳ, ಸಜ್ಜನಿಕೆಯ ರಾಜಕಾರಣಿ ಶಾಸಕ ನಿರಂಜನಕುಮಾರ್ ವಿನಯದಿಂದ ಅನುದಾನ ತಂದಿದ್ದಾರೆ. ಗುಂಡ್ಲುಪೇಟೆಯಲ್ಲಿ ಕಳೆದ ಬಾರಿ ಬಿಎಸ್‍ವೈ ಬಿಜೆಪಿ ಅಧಿಕಾರಕ್ಕೆ ತಂದಿದ್ದು, ಅದನ್ನು ಹೆಮ್ಮರವಾಗಿ ಬೆಳೆಸಬೇಕು. ನಾಲ್ಕು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಿಸಬೇಕು ಎಂದು ಶಾಸಕ ಮಹೇಶ್ ಮನವಿ ಮಾಡಿದರು.
ರಾಗಾ ವಿರುದ್ಧ ಶಾಸಕ ಮಹೇಶ್ ಆಕ್ರೋಶ :
ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಬ್ರಿಟಿಷರ ನಾಡಿಗೆ ಹೋದಾಗ’ರಾಹುಲ್ ಗಾಂಧಿ ಹೇಳಿದ್ದಾರೆ. ಇದು ದೇಶಕ್ಕೆ ದೇಶಕ್ಕೆ ಮಾಡಿದ ಅಪಮಾನವಾಗಿದೆ. ಬಿಜೆಪಿ ಆಡಳಿದ ಅವಧಿಯಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಜೀವಂತವಾಗಿದೆ. ಇಂದು ಬಿಜೆಪಿ ಹೆಮ್ಮರವಾಗಿ ಬೆಳೆದಿದೆ. ನಿರಂಜನಕುಮಾರ್ ಮಾರ್ಕ್ ಕಾರ್ಡ್ ಇಟ್ಟುಕೊಂಡು ನಿಮ್ಮ ಬಳಿ ಬರುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಇಟ್ಟು ಕೊಂಡು ಬರುತ್ತಿದ್ದು, ಅದು ಬೋಗಸ್ ಆಗುತ್ತದೆ. ಆದ್ದರಿಂದ ಈ ಬಾರಿ 2 ಲಕ್ಷದ 20 ಸಾವಿರ ಮತಗಳನ್ನು ನೀಡುವ ಮೂಲಕ ಬಿಜೆಪಿ ಗೆಲ್ಲಿಸಬೇಕು ಎಂದು ಎನ್. ಮಹೇಶ್ ಕೋರಿದರು.
ಇದಕ್ಕೂ ಮೊದಲು ಬೇಗೂರಿನಿಂದ ಗುಂಡ್ಲುಪೇಟೆಗೆ ಬೈಕ್ ರ್ಯಾಲಿ ನಡೆಸಿದ ಕಾರ್ಯಕರ್ತರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಭರ್ಜರಿ ಸ್ವಾಗತ ಕೋರಿದರು.
ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಯುವ ಘಟಕದ ಅಧ್ಯಕ್ಷ ಸಂದೀಪ್, ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್, ಪುರಸಭೆ ಅಧ್ಯಕ್ಷ ಪಿ. ಗಿರೀಶ್, ಯುವಮೋರ್ಚಾ ಅಧ್ಯಕ್ಷ ಪ್ರಣಯ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.