ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ಪರ್ವ: ಮೋದಿ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಸಾವಯವ ಬೆಲ್ಲ ನೀಡಿ ಗೌರವಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಇದ್ದಾರೆ.

ಬೆಂಗಳೂರು,ಮಾ.೧೨:ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಮ್ಮ ಮೂಲ ಮಂತ್ರವಾಗಿದೆ. ಅಭಿವೃದ್ಧಿ ಕಾರ್ಯಗಳ ಮೂಲಕ ಡಬಲ್ ಇಂಜಿನ್ ಸರ್ಕಾರ ಜನರ ಋಣ ತೀರಿಸುವ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಮಂಡ್ಯದ ಗೆಜ್ಜಲಗೆರೆಯಲ್ಲಿಂದು ಬೆಂಗಳೂರು-ಮೈಸೂರು ದಶಪಥ ರಸ್ತೆಯನ್ನು ಲೋಕಾರ್ಪಣೆ ಮಾಡಿದ ನಂತರ ಬೃಹತ್ ಸಮಾವೇಶದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ದೇಶದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿದೆ.
ಜನ ನನ್ನ ಮೇಲೆ ತೋರಿರುವ ಪ್ರೀತಿಯ ಋಣವನ್ನು ಬಡ್ಡಿ ಸಮೇತ ಹಿಂದಿರುಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ದೇಶದ ಯುವಜನ, ರಸ್ತೆಗಳು ಅಭೂತಪೂರ್ವವಾಗಿ, ಆಧುನಿಕವಾಗಿ ಅಭಿವೃದ್ಧಿಯಾಗಬೇಕು ಎಂಬ ಕನಸು ಇಟ್ಟುಕೊಂಡಿದ್ದರು. ಅದರಂತೆ ಡಬಲ್ ಇಂಜಿನ್ ಸರ್ಕಾರ ಮೂಲಭೂತ ಸೌಕರ್ಯಗಳಿಗೆ ಒತ್ತು ಕೊಟ್ಟಿದೆ.
ಬೆಂಗಳೂರು-ಮೈಸೂರು ದಶಪಥ ರಸ್ತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಈ ರಸ್ತೆ ದೇಶದ ಯುವಕರು ಹೆಮ್ಮೆ ಹಾಗೂ ಗರ್ವದಿಂದ ತಲೆ ಎತ್ತಿ ನಡೆಯಲು ಕಾರಣವಾಗಿದೆ.
ಈ ರಸ್ತೆಯ ಅಭಿವೃದ್ಧಿ ವಿಕಾಸದ ಸತ್ಯ ಸಾಥ್ ಸಬ್ ಕಾ ವಿಕಾಸ್ ಜತೆಗೆ ಸಮೃದ್ಧಿಯ ರಹದಾರಿಯನ್ನೂ ತೆರೆದಿದೆ. ಆರ್ಥಿಕವಾಗಿ ಅಭಿವೃದ್ಧಿ ವೇಗವನ್ನು ಹೆಚ್ಚಿಸಲಿದೆ. ಜನತೆಗೂ ಸಂಪಾದನೆಯ ಮಾರ್ಗಗಳನ್ನು ಹೆಚ್ಚಿಸಲಿದೆ ಎಂದರು.
ಈ ರಸ್ತೆಯ ಜತೆಗೆ ಉದ್ಯೋಗಾವಕಾಶಗಳು ಸಿಗಲಿವೆ. ಕೈಗಾರಿಕೆಗಳು ಅಭಿವೃದ್ಧಿಯಾಗುತ್ತವೆ. ಆರ್ಥಿಕ ವಿಕಾಸವೂ ವೇಗ ಪಡೆಯುತ್ತದೆ ಎಂದರು.
ಈ ರಸ್ತೆಯಿಂದ ಪ್ರವಾಸೋದ್ಯಮವೂ ಅಭಿವೃದ್ಧಿಯಾಗುತ್ತದೆ. ಜನರ ಸರ್ವಾಂಗೀಣ ಅಭಿವೃದ್ಧಿಗೂ ಕಾರಣವಾಗಲಿದೆ ಎಂದರು.ಮೂಲಭೂತ ಸೌಕರ್ಯಗಳ ಒದಗಿಸುವ ಸಂದರ್ಭದಲ್ಲಿ ಕೃಷ್ಣರಾಜೇಂದ್ರ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯರಥಹ ಮಹಾನ್ ವ್ಯಕ್ತಿಗಳನ್ನು ಸ್ಮರಿಸಿಕೊಳ್ಳಬೇಕು. ಇವರು ಹಾಕಿಕೊಟ್ಟ ಹಾದಿಯಲ್ಲೇ ಬಿಜೆಪಿ ಸರ್ಕಾರ ಭಾರತ ಮಾಲಾ, ಸಾಗರ ಮಾಲಾ ಯೋಜನೆಗಳ ಮೂಲಕ ಮೂಲಭೂತ ಸೌಕರ್ಯಗಳನು ಅಭಿವೃದ್ಧಿಪಡಿಸುತ್ತಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ದಾಖಲೆಯ ೧೦ ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.
ಕರ್ನಾಟಕವು ಬದಲಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿಯಾಗಿದೆ. ಉದ್ಯೋಗ ಕ್ಷೇತ್ರ, ಹೂಡಿಕೆ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದೆ, ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಹೆದ್ದಾರಿ ಅಭಿವೃದ್ಧಿಗೆ ೧ ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ ಎಂದರು.
ಬಿಜೆಪಿ ಸರ್ಕಾರದ ಆಡಳಿತದಲ್ಲಿ ಬಡವರ ಜೀವನ ಸುಧಾರಿಸಿದೆ. ಬಡ ರೈತರ ಬದುಕನ್ನು ಹಸನು ಮಾಡುವ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ. ಡಬಲ್ ಇಂಜಿನ್ ಸರ್ಕಾರದಿಂದ ಬಡವರ, ರೈತರ, ದುರ್ಬಲರ ಅಭಿವೃದ್ಧಿ ಆಗುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನೆರವು ನೀಡಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆ, ನೀರಾವರಿ ಯೋಜನೆ, ಗ್ರಾಮೀಣ ಅಭಿವೃದ್ಧಿ ಯೋಜನೆ, ಉಜಾಲ ಯೋeನೆಗಳ ಲಾಭವನ್ನು ಕರ್ನಾಟಕ ಪಡೆದಿದೆ. ಡಬಲ್ ಇಂಜಿನ್ ಸರ್ಕಾರದಿಂದ ಜನತೆಗೆ ಲಾಭವಾಗಿದೆ. ಇದಕ್ಕಾಗಿ ಬೊಮ್ಮಾಯಿ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದರು.
ಪ್ರಧಾನಿ ಮೋದಿ ಅವರು ಆರಂಭದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿ ತಾಯಿ ಭುವನೇಶ್ವರಿಗೆ ನಮಸ್ಕಾರಗಳು ಎಂದು ಹೇಳಿ ನೆರೆದಿದ್ದ ಜನರ ಕರತಾಡನಕ್ಕೆ ಪಾತ್ರರಾದರು.
ಬೊಮ್ಮಾಯಿ ಹೇಳಿಕೆ
ಬೆಂಗಳೂರು-ಮೈಸೂರು ರಸ್ತೆ ಅಭಿವೃದ್ಧಿ ಮಾಡಿರುವುದು ಬಿಜೆಪಿ ಸರ್ಕಾರ, ಈ ಬಗ್ಗೆ ಬೇರೆ ಪಕ್ಷದ ನಾಯಕರುಗಳು ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.
ಬಿಜೆಪಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ, ಪ್ರಧಾನಿ ಮೋದಿ ಅವರು ವಿಶ್ವ ನಾಯಕರು, ಮೋದಿ ಅವರ ನೇತೃತ್ವದಲ್ಲಿ ಡಬಲ್ ಇಂಜಿನ್ ಸರ್ಕಾರ ರಾಜ್ಯದ ಅಭಿವೃದ್ಧಿ ಮಾಡಿದೆ. ಸಾಧನೆಯ ರಿಪೋರ್ಟ್ ನೋಡಿ ನಮ್ಮನ್ನು ಬೆಂಬಲಿಸಿ ಆರ್ಶೀವದಿಸಿ ಎಂದರು.
ಗಡ್ಕರಿ ಮಾತು
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕರ್ನಾಟಕ ಇತಿಹಾಸದಲ್ಲಿ ಇದು ಐತಿಹಾಸಿಕ ದಿನ, ಬೆಂಗಳೂರು-ಮೈಸೂರು ರಸ್ತೆ ನಿರ್ಮಾಣದ ವೇಳೆ ಹಳೆಯ ರಸ್ತೆಗಳನ್ನು ದುರಸ್ಥಿ ಮಾಡಿದ್ದೇವೆ. ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ಪರ್ವ ನಡೆದಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಬರುವ ಡಿಸೆಂಬರ್‌ನಲ್ಲಿ ಉದ್ಘಾಟಿಸಲಾಗುವುದು ಎಂದು ಹೇಳಿದರು.