ಡಬಲ್ ಇಂಜಿನ್ ಬಿಜೆಪಿ ಸರ್ಕಾರ : ಮಕ್ಕಳ ಬಿಸಿಯೂಟಕ್ಕೂ ಅನುದಾನ ನೀಡದ ದುಸ್ಥಿತಿ – ಶಿಕ್ಷಕರ ಪಾಲಿಗೆ ಸಂಕಷ್ಟ

ಕಳೆದ ನಾಲ್ಕು ತಿಂಗಳಿಂದ ಬಾರದ ಅನುದಾನ : ಕಾಳಜಿಯಿಲ್ಲದ ಉಸ್ತುವಾರಿ ಸಚಿವರು, ಸಂಸದರು, ಶಾಸಕರು
ರಾಯಚೂರು.ಸೆ.೨೨- ಮಹಾತ್ವಕಾಂಕ್ಷಿ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಅನುದಾನ ನೀಡಬೇಕಾಗಿದ್ದ ಡಬಲ್ ಇಂಜಿನ್ ಬಿಜೆಪಿ ಸರ್ಕಾರದ ಖಜಾನೆಯಲ್ಲಿ ಶಾಲಾ ಮಕ್ಕಳ ಬಿಸಿಯೂಟ ಸಾದಿಲ್ವಾರು ಖರ್ಚು ವೆಚ್ಚ ನೀಡಲು ಹಣವಿಲ್ಲದ ದಿವಾಳಿ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂದಿದೆ.
ಕಳೆದ ೪ ತಿಂಗಳಿಂದ ಜಿಲ್ಲೆಯ ೭ ತಾಲೂಕು ಶಾಲೆಗಳ ಬಿಸಿಯೂಟ ಪೂರೈಕೆಯ ಸಾದಿಲ್ವಾರು ಖರ್ಚುವೆಚ್ಚ ಬಿಡುಗಡೆಗೊಳ್ಳದಿರುವುದರಿಂದ ಶಿಕ್ಷಕರು ಸಾಲಸೋಲ ಮಾಡಿ, ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊಟ್ಟೆ, ತರಕಾರಿ ಹಾಗೂ ಇನ್ನಿತರ ದಿನಸುಗಳಿಗಾಗಿ ಪ್ರತಿನಿತ್ಯ ೫೦೦ ರಿಂದ ೧ ಸಾವಿರ ರೂ. ವೆಚ್ಚವಾಗುತ್ತದೆ. ರಾಜ್ಯ ಸರ್ಕಾರ ಸಕಾಲಕ್ಕೆ ಅನುದಾನ ನೀಡದಿರುವುದು, ಶಾಲಾ ಶಿಕ್ಷಕರು ಇತ್ತ ಖರ್ಚು ನಿರ್ವಹಿಸಲಾಗದೆ, ಅತ್ತ ಬಿಸಿಯೂಟ ಸ್ಥಗಿತಗೊಳಿಸದೆ, ಅಡಕತ್ತಿನ ಪರಿಸ್ಥಿತಿಯಲ್ಲಿ ಅವರಿವರನ್ನು ಕಾಡಿ, ಬೇಡಿ ಮಕ್ಕಳ ಬಿಸಿಯೂಟ ಸಿದ್ಧತೆಗೆ ಹಣ ಹೊಂದಿಸುವ ದೀನಾಯ ಸ್ಥಿತಿ ಜಿಲ್ಲೆಯ ಶಿಕ್ಷಕರದ್ದಾಗಿದೆ.
ಬಿಸಿಯೂಟ ಅನುದಾನ ಬಿಡುಗಡೆಗೆ ಸಂಬಂಧಿಸಿ ಶಿಕ್ಷಕರು ಪದೇ ಪದೇ ಜಿಲ್ಲಾ ಪಂಚಾಯತ್ ಆಡಳಿತಕ್ಕೆ ಮನವಿ ಮಾಡಿದರೂ, ಯಾವುದೇ ಪ್ರಯೋಜನಗವಾಗಿಲ್ಲ. ರಾಜ್ಯ ಸರ್ಕಾರದಿಂದಲೇ ಬಿಸಿಯೂಟ ಸಾದಿಲ್ವಾರು ಖರ್ಚುವೆಚ್ಚ ಬಿಡುಗಡೆಗೊಳ್ಳದಿರುವುದರಿಂದ ಸಂಬಂಧಪಟ್ಟ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಅಸಹಾಯಕತೆಯಿಂದ ಕೈಚೆಲ್ಲಿ ಕುಳಿತಿದ್ದರೆ, ಶಿಕ್ಷಕರಿಗೆ ಮಾತ್ರ ಬಿಸಿಯೂಟ ಬೋಧನಾ ಚಟುವಟಿಕೆಗಳಿಗಿಂತ ಪ್ರಮುಖವಾಗಿದ್ದರಿಂದ ಸಾಲಸೋಲ, ಇಲ್ಲವೆ ತಮ್ಮ ವೇತನ ಹಣ ಬಳಸಿ, ಮಕ್ಕಳಿಗೆ ಬಿಸಿಯೂಟ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಆಯಾ ಕ್ಷೇತ್ರಗಳ ಶಾಸಕರು ಮಾತ್ರ ಲಕ್ಷಾಂತರ ಸಂಖ್ಯೆಯ ಶಾಲಾ ಮಕ್ಕಳ ಬಿಸಿಯೂಟಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವ ಕನಿಷ್ಟ ಕಾಳಜಿ ಪ್ರದರ್ಶಿಸದಿರುವುದು ಸಾರ್ವಜನಿಕಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.
ಇತ್ತೀಚಿಗಷ್ಟೆ ಬಿಸಿಯೂಟ ಸಿಬ್ಬಂದಿ ವರ್ಗ ಮುಷ್ಕರದಲ್ಲಿ ತೊಡಗಿದ ಸಂದರ್ಭದಲ್ಲಿ ಶಾಲಾ, ಶಿಕ್ಷಕರು ಪಾಠ, ಪ್ರವಚನ ಬಿಟ್ಟು ನಳಪಾಕದಂತೆ ಸೌಟ್, ತಾಟು ಹಿಡಿದು ಮಕ್ಕಳ ಊಟ ಸಿದ್ಧತೆಯಲ್ಲಿ ತೊಡಗಿದ್ದರ ಬೆನ್ನಹಿಂದೆಯೆ ಈಗ ಬೋಧನಾ ಪ್ರಕ್ರಿಯೆಗಳನ್ನು ಬಿಟ್ಟು ಮಕ್ಕಳಿಗೆ ಪ್ರತಿನಿತ್ಯ ಬಿಸಿಯೂಟ ಒದಗಿಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಕಾಲ ಕಳೆಯುವಂತಾಗಿದೆ. ಪ್ರತಿ ತಿಂಗಳು ಒಂದು ಶಾಲೆಯಲ್ಲಿ ಕನಿಷ್ಟ ೩೦ ಸಾವಿರದಿಂದ ಗರಿಷ್ಟ ೫೦ ಸಾವಿರವರೆಗೂ ಅನುದಾನ ಅಗತ್ಯವಾಗಿದೆ. ಕಳೆದ ೪ ತಿಂಗಳಿಂದ ಸರ್ಕಾರ ಅನುದಾನ ನೀಡದಿರುವುದರಿಂದ ಒಂದೊಂದು ಶಾಲೆಯಲ್ಲಿ ೧.೩೦ ಲಕ್ಷದಿಂದ ೨ ಲಕ್ಷದವರೆಗಿನ ಬಿಸಿಯೂಟ ಖರ್ಚುವೆಚ್ಚವನ್ನು ಶಿಕ್ಷಕರೆ ಭರಿಸುವಂತಾಗಿದೆ.
ವಿವಿಧ ಕಾಮಗಾರಿಗಳಲ್ಲಿ ಶೇ.೪೦ ರಷ್ಟು ಕಮಿಷನ್ ಪಡೆಯುವ ಕೆಲ ಶಾಸಕರಂತೂ ತಮ್ಮದೇ ಕ್ಷೇತ್ರದ ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ಇಲ್ಲಿವರೆಗೂ ಒಂದು ಶಾಲೆಗೆ ಕನಿಷ್ಟ ಒಂದು ದಿನದ ಊಟಕ್ಕಾಗಿ ಖರ್ಚು ವೆಚ್ಚ ನೀಡದಿರುವುದು ಈ ಜನಪ್ರತಿನಿಧಿಗಳ ಜನಪರ ಕಾಳಜಿ ಸ್ಪಷ್ಟಗೊಳ್ಳುತ್ತದೆ. ಶಾಲಾ ಶಿಕ್ಷಕರು, ಬಿಸಿಯೂಟ ಸ್ಥಗಿತಗೊಳಿಸಿದರೆ, ಆಯಾ ಶಾಲಾ ವ್ಯಾಪ್ತಿಯ ಗ್ರಾಮಗಳ ಕೆಲ ಮುಖಂಡರು ಶಿಕ್ಷಕರ ವಿರುದ್ಧ ದೂರು ನೀಡುವ ಸಾಧ್ಯತೆಗಳ ಒತ್ತಡದಲ್ಲಿ ಕಳೆದ ೪ ತಿಂಗಳಿಂದ ತುಟಿ ಪಿಟಕ್ ಎನ್ನದೆ, ಶಿಕ್ಷಕರು ತಮ್ಮ ಕುಟುಂಬಗಳನ್ನು ಉಪವಾಸ ಬಿಟ್ಟು ಶಾಲಾ ಮಕ್ಕಳ ಬಿಸಿಯೂಟಕ್ಕಾಗಿ ತಲೆಕೆಡಿಸಿಕೊಳ್ಳುವಂತಾಗಿದೆ.
ಕಳೆದ ನಾಲ್ಕು ತಿಂಗಳಿಂದ ಬಿಸಿಯೂಟ ಅನುದಾನ ಬಿಡುಗಡೆಗೊಳ್ಳದಿರುವ ಸಂಪೂರ್ಣ ಮಾಹಿತಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸಂಸದರು, ಶಾಸಕರ ಗಮನಕ್ಕಿದ್ದರೂ, ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಮಾಹಿತಿ ಇದ್ದರೂ, ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳದಿರುವುದರಿಂದ ಶಿಕ್ಷಕರು ತಮ್ಮ ತಮ್ಮ ಶಾಲೆಯಲ್ಲಿ ಬಿಸಿಯೂಟ ಮುಂದುವರೆಸಲು ಪರದಾಡುವಂತಾಗಿದೆ.
ಶಿಕ್ಷಕರ ಸಂಘದ ಪದಾಧಿಕಾರಿಗಳು ಬಿಸಿಯೂಟ ಯೋಜನೆ ಅನುದಾನ ಬಿಡುಗಡೆಗೆ ಆಗ್ರಹಿಸುತ್ತಿದ್ದರೂ, ಕಳೆದ ೪ ತಿಂಗಳಿಂದ ಅನುದಾನ ಬಾರದೆ ಪರಿಸ್ಥಿತಿ ಗಂಭೀರವಾಗಿದೆ. ಮಕ್ಕಳ ಬಿಸಿಯೂಟಕ್ಕಾಗಿ ದಿನಸು ಅಂಗಡಿಗಳಲ್ಲಿ ಉದ್ರಿ ನೀಡುವುದನ್ನೆ ಕೆಲವೆಡೆ ಸ್ಥಗಿತಗೊಳಿಸಲಾಗಿದೆ. ತಿಂಗಳು ವೇತನದಲ್ಲಿ ಮನೆ ಕಳೆಯುವುದೇ ಕಷ್ಟ ಎನ್ನುವ ದುಬಾರಿ ಕಾಲದಲ್ಲಿ ಶಾಲೆ ನಿರ್ವಹಿಸಲು ಸ್ವಂತ ಹಣ ವೆಚ್ಚ ಮಾಡುವುದು ಹೇಗೆ ಎನ್ನುವ ಪ್ರಶ್ನೆ ಈಗ ಶಿಕ್ಷಕರನ್ನು ಕಾಡುತ್ತಿದೆ. ಒಟ್ಟಾರೆಯಾಗಿ ಶಾಲಾ ಮಕ್ಕಳಿಗೆ ಬಿಸಿಯೂಟ ಅನುದಾನ ಬಿಡುಗಡೆಗೊಳಿಸದ ದಿವಾಳಿಯಲ್ಲಿರುವ ಸರ್ಕಾರದಿಂದಾಗಿ ಜಿಲ್ಲೆಯ ಬಿಸಿಯೂಟ ವ್ಯವಸ್ಥೆ ಅಸ್ತವ್ಯಸ್ತಗೊಂಡು ಯಾವ ಕ್ಷಣದಲ್ಲಿ ಏಲ್ಲಿ ಬಿಸಿಯೂಟ ಸ್ಥಗಿತಗೊಳ್ಳುತ್ತದೋ? ಎನ್ನುವುದು ತಿಳಿಯದ ಆತಂಕ ಶಿಕ್ಷಕರನ್ನು ಕಾಡುತ್ತಿದೆ.