ಡಂಪಿಂಗ್ ಯಾರ್ಡ್ ಸೇರಿದ್ದ ಹಣದ ಕಟ್ಟು ಮರಳಿಸಿದ ಪೌರ ಕಾರ್ಮಿಕರು

ಪುತ್ತೂರು, ನ.೪- ಕಸವನ್ನು ಡಸ್ಟ್‌ಬಿನ್‌ಗೆ ಹಾಕುವ ಭರದಲ್ಲಿ ಹಣದ ಕಟ್ಟನ್ನೂ ಸಹ ಹಾಕಿದ ಘಟನೆ ನಡೆದಿದ್ದು ಬಳಿಕ ಆ ಹಣದ ಕಟ್ಟು ಬನ್ನೂರು ಡಂಪಿಂಗ್ ಯಾರ್ಡ್ ಗೆ ಸೇರಿ ಅಲ್ಲಿ ಪೌರ ಕಾರ್ಮಿಕ ಸಮಯಪ್ರಜ್ಞೆಯಿಂದ ಈ ಹಣ ಮತ್ತೆ ವಾರಸುದಾರರ ಕೈಸೇರಿದ ಘಟನೆ ಪುತ್ತೂರಿನಲ್ಲಿ ವರದಿಯಾಗಿದೆ.

ಹಣದ ನೈಜ ವಾರಸುದಾರರು ಮಾಹಿತಿ ನೀಡಿದಂತೆ ಪೌರ ಕಾರ್ಮಿಕರು ವಿಲೇವಾರಿ ಮಾಡಿದ ಕಸದ ರಾಶಿಯಲ್ಲಿ ಹಣವನ್ನು ಹುಡುಕಿ ಕೊಟ್ಟ ಘಟನೆ ನ.೨ರಂದು ನಡೆದಿದೆ. ಪೌರ ಕಾರ್ಮಿಕರ ಪ್ರಾಮಾಣಿಕತೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬರು ಆಸ್ಪತ್ರೆಯಿಂದ ಬಿಡುಗಡೆ ಹೊಂದಲು ತಂದಿದ್ದ ಹಣದ ಕಟ್ಟೊಂದು ಆಕಸ್ಮಿಕವಾಗಿ ಆಸ್ಪತ್ರೆಯ ಕಸದ ಬುಟ್ಟಿಗೆ ಸೇರಿತ್ತು. ಕಡದ ಬುಟ್ಟಿಯು ಆಸ್ಪತ್ರೆ ಮುಖ್ಯ ಕಸದ ಬುಟ್ಟಿಗೆ ಸೇರಿತ್ತು. ಕಸದೊಂದಿಗೆ ಮಿಶ್ರಗೊಂಡ ಹಣವು ನಗರಸಭೆ ತ್ಯಾಜ್ಯ ಸಂಗ್ರಾಹಕರ ಮೂಲಕ ಡಂಪಿಂಗ್ ಯಾರ್ಡ್‌ಗೆ ಸೇರಿತ್ತು. ಇತ್ತ ಕಡೆ ರೋಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಲು ಹಣವನ್ನು ಹುಡುಕಾಡಿದ ವೇಳೆ ಹಣ ಕಳೆದುಕೊಂಡಿರುವು ಬೆಳಕಿಗೆ ಬಂದಿತ್ತು. ಕೊನೆಗೆ ಕಸದ ಬುಟ್ಟಿಯಲ್ಲಿ ಅಕಸ್ಮಿಕವಾಗಿ ಹೋಗಿರಬಹುದೆಂಬ ನಿಟ್ಟಿನಲ್ಲಿ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ದಯಾನಂದ ಅವರ ಮೂಲಕ ನಗರಸಭೆ ಪೌರ ಕಾರ್ಮಿಕರನ್ನು ಸಂಪರ್ಕಿಸಿದರು. ಬಳಿಕ ಆಸ್ಪತ್ರೆಯ ರೂಟ್‌ನಲ್ಲಿ ಕಸ ಸಂಗ್ರಹ ಮಾಡುತ್ತಿರುವ ಪೌರ ಕಾರ್ಮಿಕರಾದ ಯಮುನಪ್ಪ ಮತ್ತು ಸದ್ದಾಂ ಹುಸೇನ್ ಅವರು ಡಂಪಿಂಗ್ ಯಾರ್ಡ್‌ನಲ್ಲಿ ಪರಿಶೀಲಿಸಿದಾಗ ಕಾಣೆಯಾದ ಹಣದ ಕಟ್ಟು ತ್ಯಾಜ್ಯದೊಂದಿಗೆ ಪತ್ತೆಯಾಗಿದೆ. ಹಣ ಕಟ್ಟು ಸಿಕ್ಕಿದ ತಕ್ಷಣ ರೋಗಿ ನೆಮ್ಮದಿಯಿಂದ ಉಸಿರು ಬಿಟ್ಟು, ಪ್ರಾಮಾಣಿಕತೆ ಮೆರೆದ ಪೌರ ಕಾರ್ಮಿಕರನ್ನು ಅಭಿನಂದಿಸಿದರು.

ಚಿನ್ನ ಕೂಡ ಸಿಕ್ಕಿತ್ತು!

ಪೌರ ಕಾರ್ಮಿಕರು ಪ್ರಾಮಾಣಿಕತೆ ಪ್ರದರ್ಶಿಸುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮುನ್ನ ಕೂಡ ಈ ರೀತಿ ಘಟನೆ ನಡೆದಿತ್ತು. ವರ್ಷಗಳ ಹಿಂದೆ ಕಸ ಸಂಗ್ರಹಕರು ತ್ಯಾಜ್ಯ ವಿಲೇವಾರಿ ಮಾಡುವ ಸಂದರ್ಭ ಚಿನ್ನಾಭರಣವೂ ಸಿಕ್ಕಿತ್ತು. ಕೋರ್ಟು ರಸ್ತೆಯಲ್ಲಿ ಅಂಡಿಗಳಿಂದ ಕಸ ಸಂಗ್ರಹ ಮಾಡುತ್ತಿದ್ದ ಪೌರ ಕಾರ್ಮಿಕರು ಪ್ಲಾಸ್ಟಿಕ್ ಕಟ್ಟುಗಳಲ್ಲಿ ಕಸವನ್ನು ಸಂಗ್ರಹ ಮಾಡಿ ಬನ್ನೂರು ಡಂಪಿಂಗ್ ಯಾರ್ಡ್‌ಗೆ ವಿಲೇವಾರಿ ಮಾಡಿದ್ದರು. ಈ ಸಂದರ್ಭ ಚಿನ್ನಾಭರಣ ಮಳಿಗೆಯಿಂದ ಪ್ಲಾಸ್ಟಿಕ್ ಕಟ್ಟುಗಳಲ್ಲಿ ಕಸದ ಜೊತೆ ಚಿನ್ನಾಭರಣವೂ ಕಸ ಸಂಗ್ರಹಗಾರರ ಕಸದ ರಾಶಿಯ ಪಾಲಾಗಿತ್ತು. ಈ ಕುರಿತು ಚಿನ್ನಾಭರಣ ಮಳಿಗೆಯವರು ತಕ್ಷಣ ನಗರಸಭೆ ಅಧಿಕಾರಿಗಳ ಮೂಲಕ ಮಾಹಿತಿ ನೀಡಿ ಪೌರ ಕಾರ್ಮಿಕರಿಗೆ ತಿಳಿಸಿದರು. ಪೌರ ಕಾರ್ಮಿಕರು ಡಂಪಿಂಗ್ ಯಾರ್ಡ್‌ನಲ್ಲಿ ಕಸದ ರಾಶಿಯಲ್ಲಿ ಚಿನ್ನಾಭರಣವಿದ್ದ ಪ್ಲಾಸ್ಟಿಕ್ ಕಟ್ಟನ್ನು ಹುಡುಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ವಾರಿಸುದಾರರಿಗೆ ಹಸ್ತಾಂತರಿಸುವ ಮೂಲಕ ಈ ಹಿಂದೆಯೂ ಪ್ರಾಮಾಣಿಕತೆ ಮೆರೆದ ವಿಚಾರ ನಡೆದಿತ್ತು. ಒಟ್ಟಿನಲ್ಲಿ ಪೌರ ಕಾರ್ಮಿಕರ ಪ್ರಮಾಣಿಕತೆ ಎಲ್ಲೆಡೆ ಪ್ರಶಂಸೆಗೆ ವ್ಯಕ್ತವಾಗಿದೆ.