ಠೇವಣಿದಾರರಿಗೆ ಕಾನೂನಿನ ರಕ್ಷಣೆ

ಬೆಂಗಳೂರು, ಸೆ. ೧೬- ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆಯ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಇಂದು ಅಂಗೀಕಾರ ನೀಡಿತು.ಹಣಕಾಸು ಸಂಸ್ಥೆಗಳಲ್ಲಿ ಠೇವಣಿ ಇಡುವ ಠೇವಣಿದಾರರಿಗೆ ವಂಚಿಸುವ ಅಪರಾಧವನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಲು ಹಾಗೂ ಇಂತಹ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲು ಈ ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ವಿಧಾನಸಭೆಯಲ್ಲಿಂದು ವಿಘೇಯಕವನ್ನು ಮಂಡಿಸಿ, ವಿಧೇಯಕಕ್ಕೆ ಒಪ್ಪಿಗೆ ನೀಡುವಂತೆ ಕೋರಿದರು.ಈ ವಿಧೇಯಕ ಜಾರಿಯಿಂದ ಹಣಕಾಸು ಸಂಸ್ಥೆಗಳಲ್ಲಿ ಠೇವಣಿ ಇಟ್ಟು ನಷ್ಟ ಅನುಭವಿಸುವ ಠೇವಣಿದಾರರಿಗೆ ರಕ್ಷಣೆ ಒದಗಿಸಲು ಸಾಧ್ಯವಾಗುತ್ತದೆ. ಜತೆಗೆ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಣವನ್ನು ದುರುಪಯೋಗಪಡಿಸಿಕೊಳ್ಳುವವರಿಗೂ ಶಿಕ್ಷೆ ನೀಡಲು ಅನುಕೂಲವಾಗುತ್ತದೆ. ಹಾಗಾಗಿ ಈ ಕಾಯ್ದೆಗೆ ಒಪ್ಪಿಗೆ ನೀಡಬೇಕು ಎಂದು ಅವರು ಹೇಳಿದರು.ಈ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ. ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಒಪ್ಪಿಗೆ ಪಡೆದು ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದರು.ಠೇವಣಿದಾರರಿಗೆ ವಂಚನೆ ಎಸಗುವ ಆರೋಪಿತ ಸಂಸ್ಥೆಯ ವಿರುದ್ಧ ರಾಜ್ಯಾದ್ಯಂತ ಇರುವ ಪ್ರಕರಣಗಳನ್ನು ಒಂದೇ ಪ್ರಕರಣ ಎಂದು ದಾಖಲಿಸಿ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಅವರು ಹೇಳಿದರು.ಇದಾದ ನಂತರ ಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಅವರು ವಿಧೇಯಕವನ್ನು ಮತಕ್ಕೆ ಹಾಕಿದ್ದು, ಸದನ ಧ್ವನಿಮತದಿಂದ ಅಂಗೀಕಾರಕ್ಕೆ ಒಪ್ಪಿಗೆ ನೀಡಿತು.

ಅಕ್ರಮ – ಸಕ್ರಮ ಅರ್ಜಿ ಸಲ್ಲಿಕೆಗೆ ಕಾಲಾವಕಾಶ
ಬಗರ್‌ಹುಕುಂ ಭೂಮಿ ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಒಂದು ವರ್ಷ ಕಾಲಾವಕಾಶ ನೀಡುವ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ-೨೦೨೨ಕ್ಕೆ ವಿಧಾನಸಭೆ ಇಂದು ಅಂಗೀಕಾರ ನೀಡಿತು.
ಕಂದಾಯ ಸಚಿವ ಆರ್. ಅಶೋಕ್, ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ದಿನಾಂಕ:೧-೧-೨೦೦೫ರ ಹಿಂದಿನಿಂದ ಸಾಗುವಳಿ ಮಾಡಲಾಗುತ್ತಿರುವ ೧೭-೩-೨೦೧೮ ರಿಂದ ೧೬-೩-೨೦೧೯ ರವರೆಗೆ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಗಳನ್ನು ಸಕ್ರಮಗೊಳಿಸಲು ನಮೂನೆ-೫೭ನ್ನು ಸಲ್ಲಿಸುವುದಕ್ಕೆ ಒಂದು ವರ್ಷ ಕಾಲಾವಕಾಶ ನೀಡುವ ಸಲುವಾಗಿ ಈ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗುತ್ತಿದೆ ಎಂದರು.ಸಂಸತ್ತಿನ ಸಾರ್ವತ್ರಿಕ ಚುನಾವಣೆ ಮಾದರಿ ನೀತಿ ಸಂಹಿತೆ ಕಾರಣ ೧೦-೩-೨೦೧೯ ರಿಂದ ಅರ್ಜಿಗಳನ್ನು ಸ್ವೀಕರಿಸಿರುವುದಿಲ್ಲ ಮತ್ತು ಶಾಸಕರು ಹಾಗೂ ಸಾರ್ವಜನಿಕರಿಂದ ಈ ಬಗ್ಗೆ ಹಲವು ಮನವಿಗಳು ಸ್ವೀಕೃತಗೊಂಡಿವೆ. ಹಾಗಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ-೧೯೬೪ ರ ೯೪ಎ ಪ್ರಕರಣವನ್ನು ತಿದ್ದುಪಡಿ ಮಾಡುವುದರ ಮೂಲಕ ನಮೂನೆ-೫೭ನ್ನು ಸಲ್ಲಿಸುವುದಕ್ಕಾಗಿ ಸಮಯವನ್ನು ವಿಸ್ತರಿಸಲು ಕಂದಾಯ ಅಧಿನಿಯಮಕ್ಕೆ ತಿದ್ದುಪಡಿ ಅವಶ್ಯವೆಂದು ಪರಿಗಣಿಸಿ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗಿದೆ. ಇದಕ್ಕೆ ಒಪ್ಪಿಗೆ ನೀಡಬೇಕು ಎಂದು ಕೋರಿದರು.ಈ ವಿಷಯವು ತುರ್ತು ಸ್ವರೂಪದ್ದಾಗಿದ್ದರಿಂದ ಮತ್ತು ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳು ಅಧಿವೇಶನದಲ್ಲಿ ಇಲ್ಲದಿದ್ದುದರಿಂದ ೨೬-೫-೨೦೨೨ ರಂದು ಕರ್ನಾಟಕ ಭೂ ಕಂದಾಯ ತಿದ್ದುಪಡಿ ಆದ್ಯಾದೇಶವನ್ನು ಹೊರಡಿಸಲಾಗಿತ್ತು. ಈ ವಿಧೇಯಕವು ಆದ್ಯಾದೇಶದ ಬದಲಿ ವಿಧೇಯಕವಾಗಿದೆ ಎಂದರು.ಈ ತಿದ್ದುಪಡಿಯಿಂದ ಯಾವುದೇ ಹೆಚ್ಚಿನ ವೆಚ್ಚಗಳು ಇರುವುದಿಲ್ಲ. ಈ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ನೀಡುವಂತೆ ಸದನವನ್ನು ಕೋರಿದರು.ಇದಾದ ನಂತರ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧೇಯಕವನ್ನು ಮತಕ್ಕೆ ಹಾಕಿದ್ದು, ಸದನ ಧ್ವನಿಮತದಿಂದ ವಿಧೇಯಕಕ್ಕೆ ಅಂಗೀಕಾರ ನೀಡಿತು.